×
Ad

ಬಹುಕೋಟಿ ವಂಚನೆ ಹಗರಣದ ತನಿಖೆಗೆ ನೆರವಾಗಲು ತಜ್ಞ ಅಧಿಕಾರಿಗಳ ನಿಯೋಜನೆಗೆ ಸಿಬಿಐ ಪ್ರಸ್ತಾ

Update: 2018-07-08 20:33 IST

ಹೊಸದಿಲ್ಲಿ, ಜು.8: ಪಿಎನ್‌ಬಿಯ 13,000 ಕೋ.ರೂ.ಗೂ ಹೆಚ್ಚಿನ ಮೊತ್ತದ ಹಗರಣ ಸೇರಿದಂತೆ ಇತರ ಆರ್ಥಿಕ ವಂಚನೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಇತರ ಸಚಿವಾಲಯಗಳಿಂದ ಬ್ಯಾಂಕಿಂಗ್ ಮತ್ತು ತೆರಿಗೆ ತಜ್ಞರನ್ನು ನಿಯೋಜನೆಗೊಳಿಸಲು ನಿರ್ಧರಿಸಿದ್ದು, ಉತ್ತಮ ಆರ್ಥಿಕ ಪ್ರೋತ್ಸಾಹ ನೀಡುವುದಾಗಿ ತಿಳಿಸಿದೆ.

ಸಲಹೆಗಾರ(ಬ್ಯಾಂಕಿಂಗ್), ಹಿರಿಯ ಸಲಹೆಗಾರ (ವಿದೇಶ ವ್ಯವಹಾರ ಅಥವಾ ವಿದೇಶಿ ವಿನಿಮಯ), ಸಹಾಯಕ ಸಲಹೆಗಾರ(ವಿದೇಶ ವ್ಯವಹಾರ ಅಥವಾ ವಿದೇಶಿ ವಿನಿಮಯ) ಹಾಗೂ ಹಿರಿಯ ಸಲಹೆಗಾರ (ತೆರಿಗೆ)- ಈ ಹುದ್ದೆಗಳಿಗೆ ನಿಯೋಜನೆ ಮೇರೆಗೆ ಅಧಿಕಾರಿಗಳನ್ನು ನಿಯೋಜಿಸುವಂತೆ ಸಿಬಿಐ ಹಲವು ಇಲಾಖೆಗಳಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದೆ. ಆಯ್ಕೆಯಾದವರು ಆರಂಭದಲ್ಲಿ ಸಿಬಿಐಯಲ್ಲಿ ಕಿರು ಅವಧಿಗೆ ಒಪ್ಪಂದದ ಆಧಾರದಲ್ಲಿ ಕಾರ್ಯ ನಿರ್ವಹಿಸಬೇಕು. ಬ್ಯಾಂಕಿಂಗ್, ವಿದೇಶ ವ್ಯವಹಾರ ಮತ್ತು ವಿದೇಶಿ ವಿನಿಮಯ, ತೆರಿಗೆ ಪದ್ದತಿ ಒಳಗೊಂಡ ಪ್ರಕರಣಗಳ ತನಿಖೆ ಕಾರ್ಯದಲ್ಲಿ ತಾಂತ್ರಿಕ ನೆರವು ನೀಡುವುದು, ಇತರ ತಾಂತ್ರಿಕ ಅಧಿಕಾರಿಗಳ ಕಾರ್ಯದ ಮೇಲ್ವಿಚಾರಣೆ ನಡೆಸುವುದು ಮುಂತಾದ ಕಾರ್ಯವನ್ನು ಇವರು ನಿರ್ವಹಿಸುತ್ತಾರೆ. ಸಿಬಿಐಗೆ ನಿಯೋಜನೆ ಮೇರೆಗೆ ಆಗಮಿಸುವ ಅಧಿಕಾರಿಗಳು ಪಡೆಯುತ್ತಿರುವ ಸಂಬಳದ ಶೇ.20ರಷ್ಟು ಮೊತ್ತವನ್ನು ವಿಶೇಷ ಭದ್ರತಾ ಭತ್ತೆಯಾಗಿ ಪಡೆಯಲಿದ್ದಾರೆ. ಅರ್ಜಿ ಸಲ್ಲಿಸಿದವರು ಬಳಿಕ ಹಿಂಪಡೆಯಲು ಅವಕಾಶವಿಲ್ಲ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

 ಸಿಬಿಐ ಕೆಲ ದಿನಗಳ ಹಿಂದೆ ಐಡಿಬಿಐ ಬ್ಯಾಂಕ್‌ನಲ್ಲಿ ನಡೆದಿರುವ 600 ಕೋಟಿ ರೂ. ಮೊತ್ತದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್‌ನ ಮಾಜಿ ಸಿಎಂಡಿ (ಏರ್‌ಸೆಲ್‌ನ ಮಾಜಿ ಪ್ರವರ್ತಕ) ಸಿ.ಶಿವಶಂಕರನ್, ಅವರ ಪುತ್ರ ಹಾಗೂ ಅವರ ನಿಯಂತ್ರಣದಲ್ಲಿರುವ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಅಲ್ಲದೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದೆ ಎನ್ನಲಾಗಿರುವ 2,654 ಕೋಟಿ ರೂ. ಮೊತ್ತದ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಬ್ಯಾಂಕಿನ ಇಬ್ಬರು ನಿವೃತ್ತ ಹಿರಿಯ ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ. ಅಲ್ಲದೆ ಆರ್ಥಿಕ ವಂಚನೆ ಆರೋಪದಲ್ಲಿ ಆರ್‌ಬಿಐಯ ಹಲವು ಮಾಜಿ ಅಧಿಕಾರಿಗಳ ಮೇಲೂ ಸಿಬಿಐ ನಿಗಾ ಇರಿಸಿದೆ. 2017ರಲ್ಲಿ ಸಿಬಿಐ 939 ನಿಯಮಿತ ಪ್ರಕರಣ ಹಾಗೂ 137 ಪ್ರಾಥಮಿಕ ತನಿಖೆಗಳನ್ನು ದಾಖಲಿಸಿದ್ದು ವರ್ಷಾಂತ್ಯದಲ್ಲಿ ಸುಮಾರು 9,383 ಪ್ರಕರಣಗಳು ವಿಚಾರಣೆಗೆ ಬಾಕಿಯುಳಿದಿದೆ. ಆರ್ಥಿಕ ತಜ್ಞರನ್ನು ನೇಮಕ ಮಾಡಿಕೊಳ್ಳುವುದರಿಂದ ಆರ್ಥಿಕ ವಂಚನೆ ಪ್ರಕರಣಗಳ ತನಿಖೆ ತ್ವರಿತ ಗತಿಯಲ್ಲಿ ಸಾಗಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News