×
Ad

ಕ್ಯಾನ್‌ಗಳನ್ನು ಧರಿಸಿ ನಡೆದಾಡುವ ಎರಡೂ ಕಾಲುಗಳಿಲ್ಲದ ಬಾಲಕಿ

Update: 2018-07-08 20:35 IST

ಎಂಟರ ಹರೆಯದ ಬಾಲಕಿ ಮಯಾ ಮುಹಮ್ಮದ್ ಅಲಿ ಮೆರ್ಹಿಗೆ ಹುಟ್ಟುವಾಗಲೇ ಎರಡೂ ಕಾಲುಗಳಿರಲಿಲ್ಲ. ಉತ್ತರ ಸಿರಿಯಾದ ಇದ್ಲಿಬ್‌ನಲ್ಲಿರುವ ನಿರ್ವಸಿತರ ಶಿಬಿರದಲ್ಲಿ ಆಕೆ ಹಳೆಯ ಕ್ಯಾನ್‌ಗಳನ್ನೇ ಮಂಡಿಗಳಿಗೆ ಸಿಕ್ಕಿಸಿಕೊಂಡು ಮೊದಲ ಹೆಜ್ಜೆಗಳನ್ನು ಇರಿಸಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಳು.

ಪುಟ್ಟ ಮಯಾ ತನ್ನ ತಂದೆ ಕ್ಯಾನ್‌ಗಳನ್ನು ಬಳಸಿ ಸಿದ್ಧಗೊಳಿಸಿದ್ದ ಕೃತಕ ಕಾಲುಗಳನ್ನು ಧರಿಸಿ ನಡೆದಾಡಲು ಬವಣೆ ಪಡುತ್ತಿದ್ದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಟರ್ಕಿ ಆಕೆಯನ್ನು ಬರಮಾಡಿಕೊಂಡಿದೆ.

ಮಯಾಳ ತಂದೆ ಮುಹಮ್ಮದ್ ಮೆರ್ಹಿ ಕೂಡ ಮಗಳಂತೆಯೇ ಅಂಗವಿಕಲ. ಅವರಿಗೂ ಕಾಲುಗಳಿಲ್ಲ. ಅಲೆಪ್ಪೋದಲ್ಲಿ ನಾಗರಿಕ ಯುದ್ಧದ ಸಂದರ್ಭ ಜೀವವುಳಿಸಿಕೊಳ್ಳಲು ಪತ್ನಿ ಮತ್ತು ಆರು ಮಕ್ಕಳೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದ ಆತ ಬಂಡುಕೋರರ ನಿಯಂತ್ರಣದ ಇದ್ಲಿಬ್‌ನಲ್ಲಿಯ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದರು.

‘ನಾವು ತುಂಬ ಸವಾಲುಗಳನ್ನು ಎದುರಿಸಿದ್ದೇವೆ. ವಿಶೇಷವಾಗಿ ನಾವು ವಾಸವಾಗಿದ್ದ ಸ್ಥಳದಿಂದ ತೆರಳುವುದು ತುಂಬ ಕಷ್ಟವಾಗಿತ್ತು. ನನ್ನ ಮಗಳಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ,ನನ್ನ ಹಾಗೆ ಅವಳಿಗೂ ಕಾಲುಗಳಿಲ್ಲ. ಹೀಗಾಗಿ ಆಕೆ ಬಿದ್ದು ಗಾಯಗೊಳ್ಳದಂತೆ ರಕ್ಷಿಸಲು ನಾವು ಏನಾದರೊಂದನ್ನು ಮಾಡಬೇಕಿತ್ತು. ಆಗ ಹುಟ್ಟಿಕೊಂಡಿದ್ದೇ ಹಳೆಯ ಟ್ಯೂಬ್‌ಗಳು ಮತ್ತು ಕ್ಯಾನ್‌ಗಳಿಂದ ಮಾಡಿದ ಈ ಕಾಲುಗಳು ಎನ್ನುತ್ತಾರೆ ಮುಹಮ್ಮದ್ ಮೆರ್ಹಿ.

ಇದೀಗ ಮಯಾ ಮತ್ತು ಮುಹಮ್ಮದ್ ಮೆರ್ಹಿ ಟರ್ಕಿಯ ಇಸ್ತಾಂಬುಲ್‌ನಲ್ಲಿದ್ದು, ಹೊಸ ಆಧುನಿಕ ಕೃತಕ ಕಾಲುಗಳನ್ನು ಅಳವಡಿಸಿದ ಮೂರು ತಿಂಗಳೊಳಗೆ ಮಯಾ ಯಾರದೇ ನೆರವಿಲ್ಲದೆ ನಡೆದಾಡುತ್ತಾಳೆ ಎಂಬ ಆಶಯವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಮುಹಮ್ಮದ್ ಮೆರ್ಹಿ ಕ್ಯಾನುಗಳನ್ನು ಬಳಸಿ ನಡೆದಾಡುವುದನ್ನು ಮಯಾಗೆ ಅಭ್ಯಾಸ ಮಾಡಿಸಿ ತಮ್ಮ ಕೆಲಸವನ್ನು ಸುಲಭವಾಗಿಸಿದ್ದಾರೆ ಎಂದು ವೈದ್ಯರು ಪ್ರಶಂಸಿಸಿದ್ದಾರೆ.

ತನ್ನ ಮಗು ನಡೆದಾಡುವಂತೆ ಮಾಡಲು ಅವರು ಪ್ರತಿಯೊಂದೂ ಪ್ರಯತ್ನವನ್ನು ಮಾಡಿದ್ದಾನೆ ಮತ್ತು ದೇವರು ಅವರಿಗೆ ನೆರವಾಗಿದ್ದಾರೆ. ಕ್ಯಾನ್‌ಗಳಿಂದ ಸಿದ್ಧಗೊಳಿಸಿದ ಕೃತಕ ಕಾಲುಗಳ ನೆರವಿನಿಂದ ಮಯಾ ನಡೆಯುತ್ತಾಳೆ ಎನ್ನುವುದನ್ನು ಸಾಮಾನ್ಯವಾಗಿ ಯಾರೂ ನಂಬಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಟರ್ಕಿಯ ಕೃತಕ ಅವಯವಗಳ ತಜ್ಞ ಝೆಕಿ ಕಲ್ಕು.

ಮಯಾ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವುದು,ಸ್ವತಂತ್ರವಾಗಿ ನಡೆದಾಡುವುದು ಅತ್ಯಂತ ಮುಖ್ಯವಾಗಿದೆ. ಅದು ನಮ್ಮೆಲ್ಲರ ಪಾಲಿಗೆ ಹೊಸ ಜೀವನವಾಗಲಿದೆ. ಆಕೆ ಸರಾಗವಾಗಿ ನಡೆದಾಡುವುದನ್ನು,ಯಾವುದೇ ತೊಂದರೆಯಿಲ್ಲದೆ ಶಾಲೆಗೆ ಹೋಗಿ ಬರುವುದನ್ನು ಕಾಣುವುದು ನನ್ನ ಕನಸಾಗಿದೆ ಎನ್ನುತ್ತಾರೆ ಮುಹಮ್ಮದ್ ಮೆರ್ಹಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News