ಶೀಘ್ರ ಪ್ರಾರಂಭವಾಗಲಿದೆ ರಾಮಾಯಣ ಎಕ್ಸ್‌ಪ್ರೆಸ್ ರೈಲು
ಹೊಸದಿಲ್ಲಿ, ಜು.8: ಅಯೋಧ್ಯೆಯಿಂದ ರಾಮೇಶ್ವರಂ ಮೂಲಕ ಶ್ರೀಲಂಕಾದ ಕೊಲಂಬೋವರೆಗೆ ರಾಮಾಯಣ ಪರಿಕ್ರಮವನ್ನು ಸುತ್ತುವ ವಿಶೇಷ ಪ್ರವಾಸೀ ರೈಲು ಪ್ರಯಾಣವನ್ನು ಆರಂಭಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಹಿಂದೂ ಪುರಾಣದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ನಗರಗಳನ್ನು ಸಂದರ್ಶಿಸುವ ಯೋಜನೆ ಇದಾಗಿದ್ದು, ಈ ವಿಶೇಷ ರೈಲಿಗೆ ಶ್ರೀರಾಮಾಯಣ ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಗಿದೆ. ರಾಮೇಶ್ವರಂನ ಬಳಿಕ ಕೊಲಂಬೋಕ್ಕೆ ತೆರಳ ಬಯಸುವ ಪ್ರಯಾಣಿಕರು ಚೆನ್ನೈಯಿಂದ ರೈಲಿನ ಮೂಲಕ ಶ್ರೀಲಂಕಾ ತಲುಪಿ ಅಲ್ಲಿಂದ ಪ್ರಯಾಣ ಮುಂದುವರಿಸುವ ವ್ಯವಸ್ಥೆಯಿದೆ. ಪ್ರತಿಯೊಬ್ಬ ಪ್ರವಾಸಿ (ಭಾರತ ಪ್ರವಾಸಕ್ಕೆ ಮಾತ್ರ) 15,120 ರೂ. ಶುಲ್ಕ ಪಾವತಿಸಬೇಕು. 800 ಆಸನಗಳಿರುವ ರೈಲು ಸೇವೆಗೆ ನವೆಂಬರ್ 14ರಂದು ದಿಲ್ಲಿಯಲ್ಲಿ ಚಾಲನೆ ನೀಡಲಾಗುವುದು. 16 ದಿನಗಳಲ್ಲಿ ರಾಮಾಯಣ ಪರಿಕ್ರಮವನ್ನು ಈ ರೈಲಿನ ಮೂಲಕ ಸುತ್ತಬಹುದು. ಪ್ರಯಾಣಿಕರಿಗೆ ರೈಲಿನಲ್ಲೇ ಊಟ-ಉಪಾಹಾರದ ವ್ಯವಸ್ಥೆಯಿದೆ. ಭೇಟಿ ನೀಡುವ ಪ್ರದೇಶಗಳಲ್ಲಿ ಪ್ರಯಾಣಿಕರಿಗೆ ರಾತ್ರಿ ತಂಗುವ ಮತ್ತು ಸ್ನಾನಾದಿಗಳನ್ನು ಪೂರೈಸುವ ವ್ಯವಸ್ಥೆ ಇರುತ್ತದೆ.
ಮಾರ್ಗಮಧ್ಯದಲ್ಲಿ ಸಿಗುವ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನಕ್ಕೂ ಅವಕಾಶವಿದ್ದು, ಐಆರ್‌ಸಿಟಿಸಿಯ ಯಾತ್ರಾ ವ್ಯವಸ್ಥಾಪಕರು ರೈಲಿನಲ್ಲಿ ಪ್ರಯಾಣಿಸಿ ಪ್ರಯಾಣಿಕರಿಗೆ ಅಗತ್ಯದ ನೆರವು ನೀಡಲಿದ್ದಾರೆ ಎಂದು ಐಆರ್‌ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ದಿಲ್ಲಿಯ ಸಫ್ದರ್‌ಜಂಗ್ ಸ್ಟೇಷನ್‌ನಿಂದ ಹೊರಡುವ ರೈಲಿಗೆ ಅಯೋಧ್ಯೆ(ಹಿಂದೂ ಪುರಾಣದ ಪ್ರಕಾರ ರಾಮನ ಜನ್ಮಸ್ಥಳ)ಯಲ್ಲಿ ಪ್ರಥಮ ನಿಲುಗಡೆಯಿದೆ. ಅಲ್ಲಿಂದ ಹನುಮಾನ್ ಗಢಿ, ರಾಮ್‌ಕೋಟ್ ಮತ್ತು ಕನಕಭವನ ದೇವಳ ಸಂದರ್ಶಿಸಲು ವ್ಯವಸ್ಥೆಯಿದೆ. ಬಳಿಕ ನಂದೀಗ್ರಾಮ್, ಸೀತಾಮಡಿ, ಜನಕಪುರ, ವಾರಾಣಸಿ, ಪ್ರಯಾಗ, ಶೃಂಗವೇರ್‌ಪುರ, ಚಿತ್ರಕೂಟ, ನಾಸಿಕ್, ಹಂಪಿ ಮತ್ತು ರಾಮೇಶ್ವರಂನಲ್ಲಿ ನಿಲುಗಡೆಯಿದೆ. ರೈಲು ನಿಲ್ದಾಣದಿಂದ ಯಾತ್ರಾಸ್ಥಳಕ್ಕೆ ರಸ್ತೆ ಮೂಲಕ ಸಾಗುವ ಪ್ರಯಾಣ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಮಾಡಲಿದೆ.
ಶ್ರೀಲಂಕಾ ಸರಣಿಯ ಪ್ರಯಾಣದಲ್ಲಿ ಆಸಕ್ತಿ ಇರುವ ಪ್ರಯಾಣಿಕರನ್ನು ಚೆನ್ನೈಗೆ ಕರೆದೊಯ್ಯಲಾಗುವುದು. ಅಲ್ಲಿಂದ ವಿಮಾನದ ಮೂಲಕ ಕೊಲಂಬೋಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಯೋಜನೆಯಿಂದ ಉತ್ತಮ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಪ್ರಥಮ ಯಾತ್ರೆಗೆ ಜನತೆಯ ಪ್ರತಿಕ್ರಿಯೆ ಗಮನಿಸಿದ ಬಳಿಕ ರೈಲನ್ನು ವರ್ಷಕ್ಕೆ ಎಷ್ಟು ಬಾರಿ ಓಡಿಸಬಹುದು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಐಆರ್‌ಸಿಟಿಸಿ ನಿರ್ದೇಶಕಿ (ಪ್ರವಾಸೋದ್ಯಮ) ರಜನಿ ಹಸೀಜ ತಿಳಿಸಿದ್ದಾರೆ.