ಒಬಾಮಾಕೇರ್ ಅಡಿ ಕೋಟ್ಯಂತರ ಡಾಲರ್ ವಿಮಾ ಮೊತ್ತ ತಡೆಹಿಡಿದ ಟ್ರಂಪ್ ಆಡಳಿತ

Update: 2018-07-08 16:37 GMT

ವಶಿಂಗ್ಟನ್, ಜು.8: ಒಬಾಮಾಕೇರ್ ಆರೋಗ್ಯಸೇವೆಯಡಿ ವಿಮಾದಾರರಿಗೆ ನೀಡಬೇಕಾಗಿದ್ದ ಕೋಟ್ಯಂತರ ಡಾಲರ್ ಮೊತ್ತವನ್ನು ಶನಿವಾರ ತಡೆಹಿಡಿದಿರುವ ಟ್ರಂಪ್ ಸರಕಾರ, ನ್ಯಾಯಾಲಯದ ಹೊಸ ಆದೇಶವು ಈ ಹಣವನ್ನು ಹಂಚಿಕೆ ಮಾಡದಂತೆ ತಡೆಯುತ್ತಿದೆ ಎಂದು ತಿಳಿಸಿದೆ.

ಒಬಾಮಾಕೇರ್ ಕಾಯ್ದೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಮೆಡಿಕೇರ್ ಮತ್ತು ಮೆಡಿಕೇಡ್ ಸೇವೆಗಳ ಕೇಂದ್ರ, ಸರಕಾರದ ಈ ಕ್ರಮದಿಂದ ರೋಗಿಗಳ ಬಾಕಿ ಮೊತ್ತ ಪಾವತಿಸಲು 10.4 ಬಿಲಿಯನ್ ಡಾಲರ್ ಕೊರತೆ ಉಂಟಾಗಿದೆ ಎಂದು ತಿಳಿಸಿದೆ. ಕಳೆದ ವರ್ಷ ರಿಪಬ್ಲಿಕನ್ ನಿಯಂತ್ರಣದಲ್ಲಿರುವ ಕಾಂಗ್ರೆಸ್ ಈ ಕಾನೂನನ್ನು ರದ್ದುಗೊಳಿಸಿ ಬದಲಾವಣೆ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ತನ್ನ ನಿಯಂತ್ರಕ ಅಧಿಕಾರವನ್ನು ಬಳಸಿದ ಟ್ರಂಪ್ ಆಡಳಿತ ಒಬಾಮಾಕೇರ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಲಾಗಿದೆ.

ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜಾರಿಗೆ ತಂದಿದ್ದ ಈ ಯೋಜನೆಯಿಂದ ಈವರೆಗೆ 20 ಮಿಲಿಯನ್ ಅಮೆರಿಕನ್ನರು ಆರೋಗ್ಯ ವಿಮೆಯನ್ನು ಪಡೆದುಕೊಂಡಿದ್ದಾರೆ. 2017ರಲ್ಲಿ ಹೆಚ್ಚು ದುಬಾರಿ ಹಾಗೂ ಅನಾರೋಗ್ಯಪೀಡಿತ ವಿಮಾದಾರರಿಗೆ ಪರಿಹಾರ ಒದಗಿಸುವ ಮೂಲಕ ಆರೋಗ್ಯ ವಿಮೆ ಮಾರುಕಟ್ಟೆಯನ್ನು ಸಮತೋಲನೆಗೊಳಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಒಬಾಮಾಕೇರ್ ಯೋಜನೆಯಡಿ ವಿಮಾ ಮೊತ್ತವನ್ನು ನೀಡಲು ಸರಕಾರ ಅನುಸರಿಸುತ್ತಿರುವ ಕ್ರಮ ಸರಿಯಿಲ್ಲ ಎಂದು ಫೆಬ್ರವರಿಯಲ್ಲಿ ನ್ಯೂ ಮೆಕ್ಸಿಕೊ ನ್ಯಾಯಾಲಯ ತಿಳಿಸಿದ ಕಾರಣ ಈ ಯೋಜನೆಯಡಿ ಬಿಡುಗಡೆ ಮಾಡಬೇಕಾಗಿದ್ದ ಮೊತ್ತವನ್ನು ತಡೆಹಿಡಿಯುವುದು ಅನಿವಾರ್ಯವಾಗಿತ್ತು ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News