ಸ್ಕಾಟ್‌ಲ್ಯಾಂಡ್ ಯಾರ್ಡ್‌ನ ಪಂಜಾಬಿ ಮಹಿಳಾ ಅಧಿಕಾರಿ ವಿರುದ್ಧ ತನಿಖೆಗೆ ಆದೇಶ

Update: 2018-07-08 16:44 GMT

ಲಂಡನ್, ಜು.8: ಬ್ರಿಟನ್‌ನ ಪಂಜಾಬ್ ಮೂಲದ ಅತ್ಯಂತ ಹಿರಿಯ ಮಹಿಳಾ ಅಧಿಕಾರಿಯನ್ನು ನಿರ್ಬಂಧಿತ ಕರ್ತವ್ಯದಲ್ಲಿಡಲಾಗಿದ್ದು, ರಾಜತಾಂತ್ರಿಕ ಗೌರವಕ್ಕೆ ನಾಮಾಂಕಿತಗೊಳ್ಳುವ ಸಲುವಾಗಿ ಆಕೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸ್ಕಾಟ್‌ಲ್ಯಾಂಡ್ ಯಾರ್ಡ್‌ನಲ್ಲಿ ತನಿಖೆ ನಡೆಯುತ್ತಿದೆ. ಸದ್ಯ ಮೆಟ್ರೊಲಿಟನ್ ಪೊಲೀಸ್ ವಿಭಾಗದಲ್ಲಿ ತಾತ್ಕಾಲಿಕ ಮುಖ್ಯ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪರಮ್ ಸಂಧು ಎಂಬ ಪಂಜಾಬಿ ಅಧಿಕಾರಿ ವಿರುದ್ಧ ಅಸಭ್ಯ ವರ್ತನೆಯ ಆರೋಪ ಹೊರಿಸಲಾಗಿದ್ದು ನೋಟಿಸ್ ಜಾರಿ ಮಾಡಲಾಗಿದೆ.

ಈ ಆರೋಪವು ಸಾಬೀತಾದಲ್ಲಿ ಆಕೆ ಶಿಸ್ತುಕ್ರಮ ಎದುರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಮ್ ಸಂಧು ಜೊತೆಗೆ ಇತರ ಇಬ್ಬರು ಅಧಿಕಾರಿಗಳಾದ ತನಿಖಾ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ನಿರೀಕ್ಷಕರ ವಿರುದ್ಧವೂ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಈ ಇಬ್ಬರು ಅಧಿಕಾರಿಗಳಿಗೆ ಕರ್ತವ್ಯದಲ್ಲಿ ಯಾವುದೇ ನಿರ್ಬಂಧವನ್ನು ಹೇರಲಾಗಿಲ್ಲ.

ರಾಣಿ 2ನೇ ಎಲಿಝಬೆತ್ ಅವರಿಂದ ಪಡೆಯುವ ಗೌರವದ ಭಾಗವಾಗಿ ವರ್ಷದಲ್ಲಿ ಎರಡು ಬಾರಿ ಕ್ವೀನ್ಸ್ ಪೊಲೀಸ್ ಮೆಡಲ್ (ಕ್ಯೂಪಿಎಂ) ನೀಡಲಾಗುತ್ತದೆ. ಈ ಪದಕವನ್ನು ಪಡೆಯಲು ಪರಮ್ ಸಂಧೂ, ತಮ್ಮ ಹೆಸರನ್ನು ಮುಂದಿಡುವಂತೆ ಇತರ ಇಬ್ಬರು ಅಧಿಕಾರಿಗಳಿಗೆ ಪ್ರಚೋದನೆ ನೀಡಿದ್ದರೇ ಎಂಬುದರ ಬಗ್ಗೆ ಸದ್ಯ ತನಿಖೆ ನಡೆಸಲಾಗುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News