ಪದ್ಮನಾಭ ದೇವಸ್ಥಾನದ ಆಭರಣ ಮ್ಯೂಸಿಯಂನಲ್ಲಿಡಲು ರಾಜಮನೆತನದ ವಿರೋಧ
ತಿರುವನಂತಪುರಂ, ಜು.8: ಅತ್ಯಂತ ಶ್ರೀಮಂತ ಹಿಂದೂ ದೇವಸ್ಥಾನಗಳಲ್ಲಿ ಒಂದಾಗಿರುವ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿರುವ ಅಪಾರ ಪ್ರಮಾಣದ ಆಭರಣಗಳನ್ನು ಹೈಟೆಕ್ ಮ್ಯೂಸಿಯಂಗಳಲ್ಲಿ ಇಡುವ ಸರಕಾರದ ಪ್ರಸ್ತಾಪವನ್ನು ತಿರುವಾಂಕೂರ್ ರಾಜಮನೆತನ ವಿರೋಧಿಸಿದೆ.
ದೇವರ ಆಭರಣಗಳು ಪ್ರದರ್ಶನಕ್ಕಿಡುವ ವಸ್ತುಗಳಲ್ಲ ಹಾಗೂ ಇವನ್ನು ದೇವಸ್ಥಾನದಿಂದ ಹೊರಗೊಯ್ಯಬಾರದು ಎಂದು ರಾಜ ಮನೆತನದವರು ಹಾಗೂ ಭಕ್ತರು ಆಗ್ರಹಿಸಿದ್ದಾರೆ. ಪದ್ಮನಾಭ ದೇವಸ್ಥಾನದ ಅಧಿಕಾರ ಈ ಹಿಂದೆ ತಿರುವಾಂಕೂರ್ ರಾಜಮನೆತನದ ಕೈಯಲ್ಲಿತ್ತು. ಪದ್ಮನಾಭ ದೇವಸ್ಥಾನದ ಬಳಿ 300 ಕೋಟಿ ರೂ. ವೆಚ್ಚದಲ್ಲಿ ಬಿಗಿಭದ್ರತೆಯ ಭೂಗತ ಮ್ಯೂಸಿಯಂ ನಿರ್ಮಿಸಿ (ಕೇಂದ್ರ ಸರಕಾರದ ವೆಚ್ಚದಲ್ಲಿ) ಇದನ್ನು ಆಕರ್ಷಕ ಪ್ರವಾಸೀ ತಾಣವಾಗಿಸುವ ಕೇಂದ್ರ ಸರಕಾರದ ಪ್ರಸ್ತಾಪವನ್ನು ಕಳೆದ ವಾರ ಕೇಂದ್ರದ ಸಹಾಯಕ ಪ್ರವಾಸೋದ್ಯಮ ಸಚಿವ ಕೆ.ಜೆ.ಆಲ್ಫೋನ್ಸೋ ರಾಜಮನೆತನದ ಮುಂದಿರಿಸಿದ್ದರು. ಕೇರಳದ ವಾಸ್ತುಶಿಲ್ಪ ಶೈಲಿಯಲ್ಲಿ ಮ್ಯೂಸಿಯಂ ನಿರ್ಮಿಸುವ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು ಯೋಜನೆ ಕುರಿತು ರಾಜಮನೆತನಕ್ಕೆ ವಿಶ್ವಾಸ ಮೂಡಿಸಲಾಗುವುದು ಎಂದು ಅಲ್ಫೋನ್ಸೋ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜಮನೆತನದವರು, ಆಭರಣಗಳ 3ಡಿ ಪ್ರತಿಬಿಂಬವನ್ನು ಮ್ಯೂಸಿಯಂನಲ್ಲಿ ಇಡಲು ಆಕ್ಷೇಪವಿಲ್ಲ.
ಆದರೆ ಆಭರಣಗಳನ್ನು ಹೊರಗೆ ಕೊಂಡೊಯ್ಯಬಾರದು ಎಂದಿದ್ದಾರೆ. ದೇವಸ್ಥಾನದಲ್ಲಿರುವ ಮೂರ್ತಿಯನ್ನು ಆಭರಣಗಳಿಂದ ಅಲಂಕರಿಸುವುದನ್ನು ಭಕ್ತರು ಬಯಸುತ್ತಿದ್ದಾರೆ. ಇವನ್ನು ಮ್ಯೂಸಿಯಂನಲ್ಲಿ ಪ್ರದರ್ಶನದ ವಸ್ತುವಾಗಿ ಇಡಲು ಭಕ್ತರು ಒಪ್ಪಲಾರರು ಎಂದು ರಾಜಮನೆತನದ ಸದಸ್ಯ ಆದಿತ್ಯ ವರ್ಮ ತಿಳಿಸಿದ್ದಾರೆ. ಕೇಂದ್ರದ ಪ್ರಸ್ತಾಪಕ್ಕೆ ಹಲವು ಭಕ್ತರೂ ವಿರೋಧ ಸೂಚಿಸಿದ್ದಾರೆ.