2016ರಲ್ಲಿ ದೇಶದಲ್ಲಿ ಅಪಹರಣಕ್ಕೊಳಗಾದ ಮಕ್ಕಳೆಷ್ಟು ಗೊತ್ತಾ?

Update: 2018-07-08 17:20 GMT

ಹೊಸದಿಲ್ಲಿ,ಜು.8: 2016ನೇ ಸಾಲಿನಲ್ಲಿ ಭಾರತದಲ್ಲಿ ಸುಮಾರು 55,000 ಮಕ್ಕಳು ಅಪಹರಣಗೊಂಡಿದ್ದು,ಹಿಂದಿನ ಸಾಲಿಗೆ ಹೋಲಿಸಿದರೆ ಶೇ.30ರಷ್ಟು ಏರಿಕೆಯಾಗಿದೆ.

ಗೃಹ ವ್ಯವಹಾರಗಳ ಸಚಿವಾಲಯದ 2017-18ರ ವರದಿಯಂತೆ 2016ರಲ್ಲಿ 54,723 ಮಕ್ಕಳು ಅಪಹರಣಗೊಂಡಿದ್ದಾರೆ,ಆದರೆ ಕೇವಲ ಶೇ.40.4ರಷ್ಟು ಪ್ರಕರಣಗಳು ದಾಖಲಾಗಿವೆ. ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಕೇವಲ 22.7 ಪ್ರಕರಣಗಳಲ್ಲಿ ದೋಷ ನಿರ್ಣಯವಾಗಿದೆ. 2014 ಮತ್ತು 2015ರಲ್ಲಿ ಅನುಕ್ರಮವಾಗಿ ಇಂತಹ 37,854 ಮತ್ತು 41,893 ಪ್ರಕರಣಗಳು ವರದಿಯಾಗಿದ್ದವು. 2017ನೇ ಸಾಲಿನ ಅಂಕಿಅಂಶಗಳು ಇನ್ನಷ್ಟೇ ಪ್ರಕಟಗೊಳ್ಳಬೇಕಿವೆ.

ಇತ್ತೀಚಿನ ದಿನಗಳಲ್ಲಿ ಗುಂಪುಗಳು ಥಳಿಸಿ ಹತ್ಯೆಗೈದ ಹೆಚ್ಚಿನ ಪ್ರಕರಣಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ಅಪಹರಣ ಕುರಿತು ವದಂತಿಗಳು ಕಾರಣವಾಗಿದ್ದರೂ, ಜನರಲ್ಲಿ ಮಕ್ಕಳ ಅಪಹರಣಗಳ ಕುರಿತು ಭೀತಿಯು,ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ,ಸಂಪೂರ್ಣ ಆಧಾರರಹಿತವಲ್ಲ ಎನ್ನುವುದನ್ನು ಈ ಅಂಕಿಅಂಶಗಳು ತೋರಿಸುತ್ತಿವೆ ಎಂದು ಸಚಿವಾಲಯದ ಅಧಿಕಾರಿಯೋರ್ವರು ಹೇಳಿದರು.

2016ರಲ್ಲಿ ದೇಶದಲ್ಲಿ 8132 ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ದಾಖಲಾಗಿದ್ದವು ಎನ್ನುವುದನ್ನೂ ವರದಿಯು ಬಹಿರಂಗಗೊಳಿಸಿದೆ. ಅದೇ ಸಾಲಿನಲ್ಲಿ ಮಕ್ಕಳ ವಿರುದ್ಧ ಅಪರಾಧಗಳ 1,06,958 ಪ್ರಕರಣಗಳು ದಾಖಲಾಗಿದ್ದು, 2015ನೇ ಸಾಲಿಗೆ ಹೋಲಿಸಿದರೆ ಶೇ.13.6ರಷ್ಟು ಏರಿಕೆಯಾಗಿದೆ. 2016ರಲ್ಲಿ ಪ್ರತಿ ಒಂದು ಲಕ್ಷ ಮಕ್ಕಳಲ್ಲಿ 24 ಮಕ್ಕಳ ವಿರುದ್ಧ ಅಪರಾಧಗಳನ್ನೆಸಗಲಾಗಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News