ಪುತ್ತೂರು: ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ

Update: 2018-07-09 08:50 GMT

ಪುತ್ತೂರು, ಜು.9: ಚಲಿಸುತ್ತಿದ್ದ ಕಾರೊಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಗೆ ಇಡೀ ಕಾರೇ ಸುಟ್ಟು ಭಸ್ಮವಾದ ಘಟನೆ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಟ್ಯಾರ್ ಎಂಬಲ್ಲಿ ನಡೆದಿದೆ.

ಪಾಲ್ತಾಡಿಯ ಇರ್ಷಾದ್ ಎಂಬವರಿಗೆ ಸೇರಿದ ಕಾರು ಇದಾಗಿದೆ. ಇರ್ಷಾದ್ ತನ್ನ ಫೋರ್ಡ್ ಐಕಾನ್ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಇರ್ಷಾದ್ ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ.

ಇರ್ಷಾದ್ ಪಾಲ್ತಾಡಿಯಿಂದ ಫೋರ್ಡ್ ಐಕಾನ್ ಕಾರಿನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನ ಹಿಂದಿನಿಂದ ಬರುತ್ತಿದ್ದ ಆ್ಯಂಬುಲೆನ್ಸ್‌ವೊಂದರ ಚಾಲಕ ಇದನ್ನು ಗಮನಿಸಿ ಇರ್ಷಾದ್ ಅವರನ್ನು ಎಚ್ಚರಿಸಿದ್ದಾರೆ. ತಕ್ಷಣ ಕಾರನ್ನು ಸಂಟ್ಯಾರ್ ತಿರುವಿನಲ್ಲಿ ನಿಲ್ಲಿಸಿದರು. ಇರ್ಷಾದ್ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಇಡೀ ಕಾರನ್ನು ಬೆಂಕಿ ಆವರಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಸಿಲುಕಿದ ಕಾರು ಸಂಪೂರ್ಣ ಭಸ್ಮವಾಗಿದೆ.

ಮಾಹಿತಿ ಪಡೆದ ಪುತ್ತೂರು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರೂ ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಈ ಬಗ್ಗೆ ಪುತ್ತೂರು ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News