ಥಾಯ್ ಲ್ಯಾಂಡ್ ಗುಹೆಯೊಳಗೆ ಸಿಲುಕಿದ್ದ 8 ಬಾಲಕರ ರಕ್ಷಣೆ

Update: 2018-07-09 16:27 GMT

ಥಾಯ್ ಲ್ಯಾಂಡ್, ಜು.9: ಇಲ್ಲಿನ ಗುಹೆಯೊಂದರಲ್ಲಿ ಸಿಲುಕಿದ್ದ 12 ಮಕ್ಕಳು ಹಾಗು ಕೋಚ್ ಒಬ್ಬರನ್ನು ಹೊರತರುವ ಕಾರ್ಯಾಚರಣೆ ಮುಂದುವರಿದಿದ್ದು, ರಕ್ಷಣಾ ತಂಡ 8ನೆ ಬಾಲಕನನ್ನು ರಕ್ಷಿಸಿದ್ದಾರೆ. ನಿನ್ನೆ ನಾಲ್ವರು ಬಾಲಕರನ್ನು ರಕ್ಷಣಾ ತಂಡ ಗುಹೆಯಿಂದ ಹೊರತಂದಿತ್ತು.

ಗುಹೆಯಿಂದ ಹೊರಬಂದ ನಾಲ್ವರು ಮಕ್ಕಳನ್ನು ತಕ್ಷಣ ಆ್ಯಂಬುಲೆನ್ಸ್ ಗೆ ಸಾಗಿಸಲಾಯಿತು. ಕಳೆದ ಎರಡು ವಾರಗಳಿಂದ 13 ಮಂದಿ ಗುಹೆಯೊಳಗೆ ಸಿಲುಕಿದ್ದಾರೆ.

ಸದ್ಯ ರಕ್ಷಿಸಲ್ಪಟ್ಟಿರುವ ಮಕ್ಕಳ ಬಗ್ಗೆ ಯಾವ ವಿವರವನ್ನು ನೀಡಲೂ ಅಧಿಕಾರಿಗಳು ನಿರಾಕರಿಸಿದ್ದಾರೆ. ಮಕ್ಕಳ ಹೆತ್ತವರಿಗೂ ಈ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಇದರಿಂದ ಕಂಗೆಟ್ಟಿರುವ ಹೆತ್ತವರು, ನಮ್ಮ ಮಕ್ಕಳನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ದೂರಿದ್ದಾರೆ. ಇನ್ನೂ ಗುಹೆಯೊಳಗೆ ಸಿಲುಕಿರುವ ಮಕ್ಕಳ ಹೆತ್ತವರು ಮತ್ತಷ್ಟು ಆತಂಕಕ್ಕೊಳಗಾಗಬಾರದು ಎಂಬ ದೃಷ್ಟಿಯಿಂದ ಸದ್ಯ ರಕ್ಷಿಸಲ್ಪಟ್ಟಿರುವ ಮಕ್ಕಳ ಗುರುತನ್ನು ರಹಸ್ಯವಾಗಿಡಲಾಗಿದೆ. ಅದಲ್ಲದೆ, ಈ ಸೋಂಕು ತಗುಲಿರುವ ಸಾಧ್ಯತೆಯಿದ್ದು ಆ ಕಾರಣದಿಂದಲೂ ಹೆತ್ತವರನ್ನು ಅವರ ಬಳಿಗೆ ಬಿಡಲಾಗುತ್ತಿಲ್ಲ ಎಂದು ನರೊಂಗ್ಸಕ್ ತಿಳಿಸಿದ್ದಾರೆ. ರಕ್ಷಿಸಲ್ಪಟ್ಟ ಮಕ್ಕಳು ಚಿಯಾಂಗ್ ರೈಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯಪೂರ್ಣವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ರವಿವಾರ ಆರಂಭವಾದ ಮೊದಲ ಹಂತದ ರಕ್ಷಣಾ ಕಾರ್ಯವು ಹತ್ತು ಗಂಟೆಗಳ ಬಿಡುವಿನ ಬಳಿಕ ಸೋಮವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಪುನಃ ಆರಂಭವಾಯಿತು. ರವಿವಾರದಂದೇ ಬಿರುಸಿನ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡ ನಾಲ್ಕು ಮಕ್ಕಳನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದರು. ಸೋಮವಾರ ಎರಡನೇ ಹಂತದ ಕಾರ್ಯಾಚರಣೆಯಲ್ಲಿ ಆದಷ್ಟು ಹೆಚ್ಚು ಮಕ್ಕಳನ್ನು ರಕ್ಷಿಸಲು ರಕ್ಷಣಾ ತಂಡ ನಿರ್ಧರಿಸಿದೆ.

ಗುಹೆಯಿಂದ ರಕ್ಷಿಸಲ್ಪಟ್ಟ ಮಕ್ಕಳು ಲಘೂಷ್ಣ ಹಾಗೂ ಬಾವಲಿ ಮತ್ತು ತರ ಹಕ್ಕಿಗಳ ಹಿಕ್ಕೆಯಿಂದ ಹರಡುವ ಗುಹೆ ರೋಗ ಎಂಬ ಶ್ವಾಸಕೋಶದ ಸೋಂಕಿಗೆ ತುತ್ತಾಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News