×
Ad

ಎಟಿಎಸ್ ಮುಖ್ಯಸ್ಥ ಕರ್ಕರೆ ಹತ್ಯೆ ಪ್ರಕರಣದ ತನಿಖೆಗೆ ಸುಪ್ರೀಂ ನಕಾರ

Update: 2018-07-09 19:56 IST

ಹೊಸದಿಲ್ಲಿ, ಜು.9: 2008ರಲ್ಲಿ ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ಸಂದರ್ಭ ನಡೆದಿದ್ದ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಹತ್ಯೆ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

 ಪ್ರಕರಣದ ಆರೋಪಿಯಾಗಿದ್ದ ಅಜ್ಮಲ್ ಕಸಬ್‌ನನ್ನು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಈಗಾಗಲೇ ಗಲ್ಲಿಗೇರಿಸಲಾಗಿರುವುದರಿಂದ ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇದೊಂದು ಭಯೋತ್ಪಾದಕ ದಾಳಿಯಾಗಿತ್ತು ಮತ್ತು ಒಂದು ಅರ್ಜಿಯ ವಿಚಾರಣೆ ಈ ನ್ಯಾಯಾಲಯದಲ್ಲಿ ನಡೆದಿದ್ದು, ಓರ್ವ ಅಪರಾಧಿಗೆ(ಕಸಬ್) ಗಲ್ಲುಶಿಕ್ಷೆ ಜಾರಿಯಾಗಿದೆ. ಈಗ ಈ ಪ್ರಕರಣವನ್ನು ಪುನರಾರಂಭಿಸಲು ನೀವು ಬಯಸುತ್ತಿದ್ದೀರಿ. ಕ್ಷಮಿಸಿ, ಹಾಗೆ ಮಾಡಲಾಗದು ಎಂದು ನ್ಯಾಯಾಲಯ ತಿಳಿಸಿತು.

ಭಯೋತ್ಪಾದಕ ದಾಳಿಯ ಸಂದರ್ಭ ಕರ್ಕರೆಯವರ ಹತ್ಯೆಯಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕು ಎಂದು ಕೋರಿ ಮಾಜಿ ಐಪಿಎಸ್ ಅಧಿಕಾರಿ ಎಸ್.ಎಂ.ಮುಶ್ರಿಫ್ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕರ್ಕರೆ ಹತ್ಯೆ ಪ್ರಕರಣದ ತನಿಖೆಗೆ ಕೋರಿ ಈ ಹಿಂದೆ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿಯನ್ನು ಕೋರ್ಟ್ ಪರಿಗಣಿಸಿರಲಿಲ್ಲ. ಅರ್ಜಿ ಸಲ್ಲಿಸಿದ್ದವರು ಈಗ ಮೃತಪಟ್ಟಿರುವ ಕಾರಣ ವ್ಯಾಜ್ಯವನ್ನು ಮುಂದುವರಿಸಲು ಬಯಸಿರುವುದಾಗಿ ಮುಶ್ರಿಫ್ ಪರ ವಕೀಲೆ ಇಂದಿರಾ ಜೈಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.

ಭಯೋತ್ಪಾದಕ ದಾಳಿಯ ಬಗ್ಗೆ ಮುಂಬೈ ಪೊಲೀಸರು ನೀಡುತ್ತಿದ್ದ ಮಾಹಿತಿಯನ್ನು ರಾಜ್ಯದ ಗುಪ್ತಚರ ಇಲಾಖೆ ಉದ್ದೇಶಪೂರ್ವಕವಾಗಿ ತಡೆಹಿಡಿದಿತ್ತು. ಗುಪ್ತಚರ ಇಲಾಖೆ ಹಾಗೂ ಮುಂಬೈ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ಒತ್ತಾಯಿಸುವುದಕ್ಕೆ ಹಲವು ಪ್ರಮುಖ ಪುರಾವೆಗಳಿವೆ ಎಂದು ತಮ್ಮ ಕೃತಿಯಲ್ಲಿ ಮುಶ್ರಿಫ್ ತಿಳಿಸಿದ್ದರು. ಇದನ್ನು ಸುಪ್ರೀಂಕೋರ್ಟ್‌ನ ಗಮನಕ್ಕೆ ಇಂದಿರಾ ಜೈಸಿಂಗ್ ತಂದರು. ಆದರೆ ಇದರಿಂದ ಪ್ರಭಾವಿತವಾಗದ ಸುಪ್ರೀಂಕೋರ್ಟ್‌ನ ನ್ಯಾಯಪೀಠವು, ಹೈಕೋರ್ಟ್ ಈಗಾಗಲೇ ಪ್ರಕರಣವನ್ನು ಮುಕ್ತಾಯಗೊಳಿಸಿದ್ದು ಈಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರ ವ್ಯಾಜ್ಯವನ್ನು ನೀವು ಮುಂದುವರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು. ಕೆಲವು ಪೊಲೀಸ್ ಅಧಿಕಾರಿಗಳು ಶಾಮೀಲಾಗಿರಬಹುದು ಎಂದು ನೀವು ಸಂದೇಹಿಸುತ್ತಿದ್ದೀರಿ. ಆದರೆ ಸಂದೇಹವನ್ನು ಪುರಾವೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲವನ್ನೂ ಮತ್ತೊಮ್ಮೆ ಆರಂಭಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News