ಮಣಿಪಾಲದ 'ಮಾಹೆ' ದೇಶದ ಶ್ರೇಷ್ಠ ವಿದ್ಯಾಸಂಸ್ಥೆ: ಕೇಂದ್ರದ ಮಾನ್ಯತೆ
ಹೊಸದಿಲ್ಲಿ, ಜು.9: ದೇಶದ ಆರು ವಿಶ್ವವಿದ್ಯಾನಿಲಯಗಳಿಗೆ ಕೇಂದ್ರ ಸರಕಾರವು ಸೋಮವಾರ ಶ್ರೇಷ್ಠ ಸಂಸ್ಥೆಗಳ ಸ್ಥಾನಮಾನ ನೀಡಿದೆ. ಈ ಪೈಕಿ ಖಾಸಗಿ ವಿಶ್ವವಿದ್ಯಾನಿಲಯಗಳಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಬಿಟ್ಸ್ (ಪಿಲನಿ) ಹಾಗೂ ಜಿಯೊ ಇನ್ ಸ್ಟಿಟ್ಯೂಟ್ ಸೇರಿದೆ.
ಸರಕಾರಿ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಹಾಗೂ ಮುಂಬೈ ಮತ್ತು ದಿಲ್ಲಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ಈ ಸ್ಥಾನಮಾನವನ್ನು ನೀಡಲಾಗಿದೆ. ಐಐಎಸ್ಸಿ, ಬೆಂಗಳೂರು, ಸರಕಾರದ 2018ರ ಎನ್‌ಐಆರ್‌ಎಫ್ ಪಟ್ಟಿಯಲ್ಲಿ (ಅಖಿಲ ಭಾರತ ರಾಷ್ಟ್ರೀಯ ಸಾಂಸ್ಥಿಕ ಶ್ರೆಯಾಂಕ ಪಟ್ಟಿ) ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಮತ್ತು ದಿಲ್ಲಿಯಲ್ಲಿರುವ ಐಐಟಿಗಳು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಐಐಟಿ ಮದ್ರಾಸ್ ಮೂರನೇ ಸ್ಥಾನ, ಐಐಟಿ ಕರಗ್ಪುರ ಐದನೇ ಸ್ಥಾನ, ಜೆಎನ್‌ಯು ಆರು ಹಾಗೂ ಐಐಟಿ ಕಾನ್ಪುರ ಏಳನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಮಣಿಪಾಲ 18ನೇ ಸ್ಥಾನದಲ್ಲಿದ್ದರೆ ಬಿಟ್ಸ್ ಪಿಲನಿ 26ನೇ ಸ್ಥಾನದಲ್ಲಿದೆ. ಶ್ರೇಷ್ಠ ವಿಶ್ವವಿದ್ಯಾನಿಲಯ ಸ್ಥಾನಮಾನ ನೀಡಲಾಗಿರುವ ಸಂಸ್ಥೆಗಳ ಪೈಕಿ ಜಿಯೊ ಸಂಸ್ಥೆಯೂ ಸೇರಿದೆ.