ಅಸ್ತಿತ್ವದಲ್ಲೇ ಇಲ್ಲದ ರಿಲಯನ್ಸ್ ಜಿಯೋ ಇನ್ ಸ್ಟಿಟ್ಯೂಟ್ ಗೆ ಶ್ರೇಷ್ಠ ವಿದ್ಯಾಸಂಸ್ಥೆಯ ಮಾನ್ಯತೆ ನೀಡಿದ ಕೇಂದ್ರ ಸರಕಾರ

Update: 2018-07-09 16:49 GMT

ಹೊಸದಿಲ್ಲಿ, ಜು.9: ದೇಶದ ಆರು ವಿಶ್ವವಿದ್ಯಾನಿಲಯಗಳಿಗೆ ಕೇಂದ್ರ ಸರಕಾರವು ಸೋಮವಾರ ಶ್ರೇಷ್ಠ ಸಂಸ್ಥೆಗಳ ಸ್ಥಾನಮಾನ ನೀಡಿದ್ದು, ಈ ಪೈಕಿ ಇರುವ ಜಿಯೊ ಇನ್ ಸ್ಟಿಟ್ಯೂಟ್ ಹೆಸರು ಅಚ್ಚರಿಗೆ ಕಾರಣವಾಗಿದೆ.

ಸದ್ಯ ಜಿಯೊ ವಿಶ್ವವಿದ್ಯಾನಿಲಯ ಅಸ್ತಿತ್ವದಲ್ಲೇ ಇಲ್ಲ. ದೇಶದ ಬೃಹತ್ ಖಾಸಗಿ ಸಂಸ್ಥೆಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಪ್ರತಿಷ್ಠಾನ ಜಿಯೊ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಪ್ರಸ್ತಾವ ಇಟ್ಟಿದೆ. ನೀತಾ ಅಂಬಾನಿ ನೇತೃತ್ವದ ರಿಲಾಯನ್ಸ್ ಫೌಂಡೇಶನ್ ಮೂಲಕ ಜಿಯೋ ಇನ್ ಸ್ಟಿಟ್ಯೂಟ್ ಇನ್ನಷ್ಟೇ ಆರಂಭವಾಗಬೇಕಿದೆ.

ಈ ಮಾನ್ಯತೆಯಿಂದಾಗಿ ಜಿಯೋ ಇನ್ ಸ್ಟಿಟ್ಯೂಟ್ ಆರಂಭದಿಂದಲೇ ಸರಕಾರದ ಉನ್ನತ ಶಿಕ್ಷಣ ನಿಯಮಗಳಿಂದ ಅಭೂತಪೂರ್ವ ಸ್ವಾತಂತ್ರ್ಯ ಪಡೆಯಲಿದೆ. ಸರಕಾರದ ನಿಯಮದ ಪ್ರಕಾರ ಇಂತಹ ಸಂಸ್ಥೆಗಳು ಅಂತರಶಿಕ್ಷಣ ಕೋರ್ಸ್ ಗಳನ್ನು ನೀಡಬೇಕು ಹಾಗು 'ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆವಿಷ್ಕಾರಗಳನ್ನು ನಡೆಸಬೇಕು. ಅಲ್ಲಿ ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳು ಮತ್ತು ಬೋಧಕವರ್ಗವಿರಬೇಕು. ವಿದ್ಯಾರ್ಥಿಗಳಿಗೆ ದೊರಕುವ ಸೌಲಭ್ಯಗಳು ಜಾಗತಿಕ ಖ್ಯಾತಿ ಗಳಿಸಿದ ಸಂಸ್ಥೆಗಳಿಗೆ ಹೋಲಿಕೆಯಾಗುವಂತಿರಬೇಕು.

ಆದರೆ ಜಿಯೋ ಇನ್ ಸ್ಟಿಟ್ಯೂಟ್ ಗೆ ಇದ್ಯಾವುದೂ ಇಲ್ಲ. ಮುಖ್ಯವಾಗಿ ಈ ಸಂಸ್ಥೆಗೆ ಸದ್ಯಕ್ಕೆ ಅಸ್ಥಿತ್ವವೇ ಇಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News