ಪ್ರಶಸ್ತಿಯ ನಿರೀಕ್ಷೆಯಲ್ಲಿ ಸಿಂಧು, ಶ್ರೀಕಾಂತ್

Update: 2018-07-09 18:19 GMT

ಬ್ಯಾಂಕಾಕ್, ಜು.9: ಇಲ್ಲಿ ಜುಲೈ 10ರಿಂದ(ಇಂದಿನಿಂದ) ಆರಂಭಗೊಳ್ಳಲಿರುವ ಬಿಡಬ್ಲೂಎಫ್ ವರ್ಲ್ಡ್ ಟೂರ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಗ್ರ ಆಟಗಾರರಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಭಾರತದ ಸವಾಲಿನ ನೇತೃತ್ವ ವಹಿಸಲಿದ್ದಾರೆ. ಕಳೆದ ವರ್ಷ ಒಲಿಂಪಿಕ್ ಬೆಳ್ಳಿಪದಕ ವಿಜೇತೆ ಸಿಂಧು ಹಾಗೂ ವಿಶ್ವದ ಮಾಜಿ ಅಗ್ರಶ್ರೇಯಾಂಕಿತ ಆಟಗಾರ ಕಿದಂಬಿ ಶ್ರೀಕಾಂತ್ ಹಲವು ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆದರೆ ಈ ವರ್ಷ ಆಡಿದ ಬಹುತೇಕ ಟೂರ್ನಿಗಳಲ್ಲಿ ಉತ್ತಮ ಆರಂಭ ಪಡೆದರೂ ಮುಂದಿನ ಹಂತದಲ್ಲಿ ಮುಗ್ಗರಿಸುವ ಮೂಲಕ ಪ್ರಶಸ್ತಿಯ ಬರ ಎದುರಿಸುತ್ತಿದ್ದಾರೆ. ಇದೀಗ ಥಾಯ್ಲೆಂಡ್ ಟೂರ್ನಿಯಲ್ಲಿ ಈ ವರ್ಷದ ಪ್ರಥಮ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಇಂಡಿಯಾ ಓಪನ್ ಟೂರ್ನಿ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದಿರುವುದು ಈ ವರ್ಷ ಸಿಂಧು ಅವರ ಅತ್ಯುತ್ತಮ ಸಾಧನೆಯಾಗಿದ್ದರೆ,ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮಲೇಶ್ಯಾದ ಖ್ಯಾತ ಆಟಗಾರ ಲೀ ಚಾಂಗ್ ವೀಯನ್ನು ಫೈನಲ್‌ನಲ್ಲಿ ಸೋಲಿಸಿದ್ದ ಕಿದಂಬಿ ಶ್ರೀಕಾಂತ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತ ಸ್ವರ್ಣ ಗೆಲ್ಲಲು ಕಾರಣರಾಗಿದ್ದರು. ಬಿಬಿಎಫ್ ವರ್ಲ್ಡ್ ಟೂರ್‌ನ ಆಗ್ನೇಯ ಏಶ್ಯಾ ಚರಣದ ಎರಡು ಟೂರ್ನಿಗಳಾದ ಮಲೇಶ್ಯಾ ಓಪನ್ ಟೂರ್ನಿ ಹಾಗೂ ಇಂಡೋನೇಶ್ಯಾ ಓಪನ್ ಟೂರ್ನಿಗಳಲ್ಲಿ ಇಬ್ಬರು ಆಟಗಾರರೂ ಉತ್ತಮ ಆರಂಭದ ಹೊರತಾಗಿಯೂ ನಿರಾಶೆ ಅನುಭವಿಸಿದ್ದಾರೆ. ಸಿಂಧು ಸೆಮಿಫೈನಲ್ ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ ಸೋತರೆ ಶ್ರೀಕಾಂತ್ ಎರಡರಲ್ಲೂ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ಥಾಯ್ಲಂಡ್ ಓಪನ್ ಟೂರ್ನಿಯ ಪ್ರಥಮ ಸುತ್ತಿನಲ್ಲಿ ಸಿಂಧು ಬಲ್ಗೇರಿಯಾದ ಲಿಂಡಾ ಝೆಚಿರಿಯನ್ನು ಎದುರಿಸಿದರೆ ಶ್ರೀಕಾಂತ್‌ಗೆ ಅರ್ಹತಾ ಸುತ್ತಿನಿಂದ ಗೆದ್ದು ಬಂದಿರುವ ಆಟಗಾರನ ಸವಾಲು ಎದುರಾಗಿದೆ. ಎಪ್ರಿಲ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಸ್ವರ್ಣ ಗೆದ್ದಿದ್ದ ಭಾರತದ ಮತ್ತೋರ್ವ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡಾ ಮುಂದಿನ ಟೂರ್ನಿಗಳಲ್ಲಿ ತಮ್ಮ ಆಟದ ಲಯ ಕಂಡುಕೊಳ್ಳಲು ವಿಫಲರಾಗಿದ್ದಾರೆ. ಸೈನಾಗೆ ಪ್ರಥಮ ಸುತ್ತಿನಲ್ಲಿ ಥಾಯ್ಲೆಂಡಿನ ಆಟಗಾರ್ತಿಯ ಸವಾಲು ಎದುರಾಗಿದೆ. ಭಾರತದ ಮತ್ತೋರ್ವ ಪ್ರಮುಖ ಆಟಗಾರ ಎಚ್.ಎಸ್.ಪ್ರಣೋಯ್ ಪ್ರಥಮ ಸುತ್ತಿನಲ್ಲಿ ಸ್ಪೇನ್‌ನ ಪಾಬ್ಲೋ ಅಬಿಯನ್ ಅವರನ್ನು ಎದುರಿಸಲಿದ್ದಾರೆ.

ಸ್ವಿಸ್ ಓಪನ್ ಚಾಂಪಿಯನ್ ಸಮೀರ್ ವರ್ಮ ಪ್ರಥಮ ಸುತ್ತಿನಲ್ಲಿ ಥಾಯ್ಲೆಂಡಿನ ತನೊಂಗ್‌ಸಕ್ ಸೇನ್‌ಸೊಂಬೂಕ್ ಅವರೆದುರು ಸೆಣಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಪಾರುಪಳ್ಳಿ ಕಶ್ಯಪ್‌ಗೆ ಪ್ರಥಮ ಸುತ್ತಿನಲ್ಲಿ ಚೀನಾದ ಅಗ್ರಶ್ರೇಯಾಂಕಿತ ಆಟಗಾರ ಶೀ ಯುಕಿ ಸವಾಲು ಎದುರಾಗಲಿದೆ. ವಿಶ್ವದ 53ನೇ ಶ್ರೇಯಾಂಕಿತ ಆಟಗಾರ್ತಿ ವೈಷ್ಣವಿ ರೆಡ್ಡಿ ಜಕ್ಕ ಪ್ರಥಮ ಸುತ್ತಿನಲ್ಲಿ ಎಂಟನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ಸಯಾಕಾ ಸಾಟೊರನ್ನು ಎದುರಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ಸಾಯ್‌ರಾಜ್ ರಂಕಿರೆಡ್ಡಿ -ಚಿರಾಗ್ ಶೆಟ್ಟಿ, ರಾಷ್ಟ್ರೀಯ ಚಾಂಪಿಯನ್ ಮನು ಅತ್ರಿ-ಬಿ.ಸುಮೀತ್ ರೆಡ್ಡಿ, ಅರ್ಜುನ್ ಎಂ.ಆರ್-ರಾಮಚಂದ್ರನ್ ಶ್ಲೋಕ್, ಕೋನಾ ತರುಣ್-ಸೌರಭ್ ಶರ್ಮ ಜೋಡಿ ಕಣಕ್ಕಿಳಿಯಲಿದೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಶಾ ಎಸ್. ರಾಮ್ , ಹಾಗೂ ಸಂಯೋಗಿತಾ ಘೋರ್ಪಡೆ ಮತ್ತು ಪ್ರಜಕ್ತ ಸಾವಂತ್ ಜೋಡಿ, ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯ್‌ರಾಜ್ ರಂಕಿರೆಡ್ಡಿ -ಅಶ್ವಿನಿ ಪೊನ್ನಪ್ಪ ಜೋಡಿ ಕಣಕ್ಕಿಳಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News