ಕರಾವಳಿಯಲ್ಲಿ ಮುಸ್ಲಿಂ ಶೈಕ್ಷಣಿಕ ಕ್ರಾಂತಿಯ ಹರಿಕಾರ ಬಿ.ಎ. ಮೊಹಿದಿನ್ ನಿರ್ಗಮನ

Update: 2018-07-10 05:01 GMT

ಬಜ್ಪೆ ಸಮೀಪದ ಕುಗ್ರಾಮವಾದ ಪೇಜಾವರ (ಬ್ಯಾರಿ ಭಾಷೆಯಲ್ಲಿ ಪ್ಯಾರ) ಎಂಬಲ್ಲಿ ಜೂನ್ 5, 1938ರಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ ಬೆಳೆದ ಬಿ.ಎ. ಮೊಹಿದಿನ್ (ಬಜ್ಪೆ ಅಬ್ದುಲ್ ಖಾದರ್ ಮೊಹಿದಿನ್) ‘ಗಣ್ಯ’ರ ಸ್ಥಾನದಲ್ಲಿ ಮೆರೆದುದರ ಹಿಂದೆ ಅವರದೇ ಪರಿಶ್ರಮವಿದೆ. ಬಹುಶಃ ಅವರು ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡದೇ ಇರುತ್ತಿದ್ದರೆ ಒಬ್ಬ ನುರಿತ ಮುತ್ಸದ್ದಿಯನ್ನು ರಾಜಕೀಯ ಕ್ಷೇತ್ರ ಕಳಕೊಳ್ಳುತ್ತಿತ್ತೋ ಏನೋ ?. ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡೇ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಬಿ.ಎ.ಮೊಹಿದಿನ್ ಮುಸ್ಲಿಮ್ ಸಮುದಾಯದ ಪ್ರಮುಖ ನಾಯಕರೂ ಆಗಿ ಗುರುತಿಸಲ್ಪಟ್ಟಿದ್ದರು.

ದ.ಕ.ಜಿಲ್ಲೆಯ ಪ್ರಪ್ರಥಮ ಮುಸ್ಲಿಮ್ ಉಸ್ತುವಾರಿ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಿ.ಎ.ಮೊಹಿದಿನ್ ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರುವಾಗಿ ಮೆರೆದವರು. ರಾಜಕೀಯ ಮಾತ್ರವಲ್ಲ ವ್ಯಕ್ತಿಗತವಾಗಿಯೂ ಒಂದೇ ಒಂದು ಕಪ್ಪು ಚುಕ್ಕೆ ಬೀಳದಂತೆ ವರ್ಛಸ್ಸು ಬೆಳೆಸಿಕೊಂಡಿದ್ದ ಬಿ.ಎ.ಮೊಹಿದಿನ್‌ ತನ್ನ  ದೂರದೃಷ್ಟಿಯಿಂದಲೇ ಕರಾವಳಿಯ ಮುಸ್ಲಿಮ್ ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿ ತಂದವರು.

ತನ್ನ ಸುತ್ತಮುತ್ತ ಅಷ್ಟೇ ಯಾಕೆ, ಸ್ವತಃ ಅಕ್ಕ-ತಂಗಿಯರೇ ಅನಕ್ಷರಸ್ಥರಾಗಿದ್ದುದನ್ನು ಕಂಡ ಬಿ.ಎ.ಮೊಹಿದಿನ್ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಪಣತೊಟ್ಟರು. ಹಾಗೇ ಹಗಲಿಡೀ ಪಾಳುಬೀಳುತ್ತಿದ್ದ ಮದ್ರಸದ ಕಟ್ಟಡದಲ್ಲೇ ಶಿಕ್ಷಣ ನೀಡಲು ಆಸಕ್ತರಾದರು. ಅದಕ್ಕೆ ಧರ್ಮಗುರುಗಳ ವಿರೋಧವಿದ್ದರೂ ಕೂಡ ಅವರ ಮನವೊಲಿಸಿ ಮೊದಲು ತನ್ನ ಹುಟ್ಟೂರು ಬಜ್ಪೆಯ ಮದ್ರಸದಲ್ಲೇ ಶಾಲೆ ತೆರೆದರು. ಆಗಿನ್ನೂ ಆಂಗ್ಲಮಾಧ್ಯಮಕ್ಕೆ ಮಕ್ಕಳ ಹೆತ್ತವರು ಒಲವು ತೋರುತ್ತಿದ್ದ ದಿನಗಳು. ಆಂಗ್ಲಮಾಧ್ಯಮ ಶಿಕ್ಷಣದ ಮಹತ್ವವನ್ನು ಅರಿತಿದ್ದ ಬಿ.ಎ.ಮೊಹಿದಿನ್ ಕನ್ನಡ ಶಾಲೆಗಳನ್ನು ಉಳಿಸುವುದರೊಂದಿಗೆ ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯಲು ಪ್ರೋತ್ಸಾಹಿಸಿದರು. ಅದರ ಫಲವಾಗಿ ಬಜ್ಪೆ ಆಸುಪಾಸಿನ ಕಾಟಿಪಳ್ಳ, ಕೃಷ್ಣಾಪುರ, ಸೂರಿಂಜೆ, ಜೋಕಟ್ಟೆ, ಬೈಕಂಪಾಡಿ ಮತ್ತಿತರ ಪ್ರದೇಶದ ಮುಸ್ಲಿಮರು ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆದರು. ಅದರ ಫಲವಾಗಿಯೇ ಮೀಫ್ (ಮುಸ್ಲಿಮ್ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಫೆಡೇಶನ್) ತಲೆ ಎತ್ತಿತು. ಇಂದು ಕರಾವಳಿ ಕರ್ನಾಟಕದಲ್ಲಿ ಮುಸ್ಲಿಮರು ಅದರಲ್ಲೂ ವಿಶೇಷವಾಗಿ ಮುಸ್ಲಿಂ ಹೆಣ್ಣುಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ದೊಡ್ಡ ಸಂಖ್ಯೆಯ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಬೆಳೆದು ಬಂದಿದ್ದರೆ ಅದರ ಹಿಂದೆ ಮೊಹಿದಿನ್ ಸಾಹೇಬರ ಪರಿಶ್ರಮ ಇದೆ.

ಐದು ದಶಕಗಳ ರಾಜಕೀಯ ಬದುಕಿನಲ್ಲಿ ಅನಿವಾರ್ಯ ಕಾರಣಕ್ಕಾಗಿ ಪಕ್ಷಾಂತರ ಮಾಡಿದ್ದರೂ ಕೂಡ ಎಲ್ಲಾ ಪಕ್ಷಗಳ, ರಾಜಕೀಯ ನಾಯಕರುಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವುದು ಬಿ.ಎ. ಮೊಹಿದಿನ್‌ರ ಹಿರಿಮೆ ಎನ್ನಬಹುದು. 1978ರಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಎ.ಮೊಹಿದಿನ್ 1980ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ದೇವರಾಜ ಅರಸು ಜೊತೆ ನಿಂತರು. ಅರಸು ನಿಧನದ ಬಳಿಕ ಮತ್ತೆ ಇಂದಿರಾ ಜೊತೆ ಸೇರಿಕೊಂಡ ಮೊಹಿದಿನ್‌ಗೆ 1983ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತು. ಆವಾಗ ಬಿ.ಎ.ಮೊಹಿದಿನ್‌ಗೆ ಶಕ್ತಿ ತುಂಬಿದ್ದು ಜನತಾ ಪಕ್ಷ. ಆ ಪಕ್ಷದ ರಾಜ್ಯ ಪ್ರಧಾನ ಕಾರ್ಯಾದರ್ಶಿ, ವಿಧಾನ ಪರಿಷತ್ ಸದಸ್ಯತ್ವ, ಮುಖ್ಯ ಸಚೇತಕ ಹಾಗೂ ಸಚಿವ ಸ್ಥಾನ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿಯೂ ಬಿ.ಎ.ಮೊಹಿದಿನ್‌ರ ಹೆಗಲ ಮೇಲೆ ಬಿತ್ತು.

1999ರಲ್ಲಿ ಜನತಾ ಪಕ್ಷ ಇಬ್ಭಾಗವಾದಾಗ ಬಿ.ಎ.ಮೊಹಿದಿನ್ ತಟಸ್ಥರಾದರು. 2002ರಲ್ಲಿ ಮತ್ತೆ ಕಾಂಗ್ರೆಸ್ ಸೇರಿಕೊಂಡ ಬಿ.ಎ.ಮೊಹಿದಿನ್ ಉಸಿರಿರುವರೆಗೂ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರು. ಹಾಗಂತ ಜನತಾ ಪಕ್ಷ ಅಥವ ಜನತಾ ದಳದ ನಾಯಕರ ಸ್ನೇಹವನ್ನು ಕಳಕೊಳ್ಳದ ಮಾನವ ಪ್ರೇಮಿಯಾಗಿದ್ದರು ಬಿ.ಎ.ಮೊಹಿದಿನ್.

ದೂರದೃಷ್ಟಿಯ ದಕ್ಷ ಆಡಳಿತಗಾರ

ಸಚಿವರಾಗಿದ್ದಾಗ ಮಂಗಳೂರು ಮಹಾನಗರ ಪಾಲಿಕೆಗೆ ಸುರತ್ಕಲ್ ಆಸುಪಾಸಿನ ಪ್ರದೇಶಗಳ ಸೇರ್ಪಡೆ, ಉಳ್ಳಾಲಕ್ಕೆ ಎಡಿಬಿ ಯೋಜನೆ ವಿಸ್ತರಣೆ, ಬೆಳ್ತಂಗಡಿಯ ಕುಗ್ರಾಮವಾದ ಪಟ್ರಮೆಗೆ ಸೇತುವೆ ನಿರ್ಮಾಣ, ತುಂಬೆ ಡ್ಯಾಂನಿಂದ ಮಂಗಳೂರಿಗೆ ನೀರು ಸರಬರಾಜು, ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿ, ಗವರ್ನ್‌ಮೆಂಟ್ ಟೂಲ್ ರೂಮ್ ಟ್ರೈನಿಂಗ್ ಸೆಂಟರ್ ಸ್ಥಾಪನೆ, ಪ್ರಾಧ್ಯಾಪಕರಿಗೆ ವೇತನ ಶ್ರೇಣಿ ಜಾರಿ, ಮಂಗಳೂರಿನ ಮೂರು ಮೆಡಿಕಲ್ ಕಾಲೇಜುಗಳಿಗೆ ಅನುಮತಿ, ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಯೋಜನೆಗೆ ಅಂಕಿತ ಇತ್ಯಾದಿ ಮಹತ್ವದ ಕೆಲಸ ಕಾರ್ಯಗಳು ಬಿ.ಎ.ಮೊಹಿದಿನ್‌ರಿಂದ ಆಗಿದೆ.

1998-99ರಲ್ಲಿ ಸುರತ್ಕಲ್ ಕೋಮುಗಲಭೆ ಸಂಭವಿಸಿದ ಸಂದರ್ಭ ಬಿ.ಎ.ಮೊಹಿದಿನ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಒಬ್ಬ ನಿಷ್ಕಳಂಕ ಜಾತ್ಯತೀತ ವ್ಯಕ್ತಿಯಾಗಿದ್ದ ಅವರು ಆ ಗಲಭೆಯನ್ನು ಹತ್ತಿಕ್ಕಲು ಪಟ್ಟ ಶ್ರಮ ಅಪಾರ. ಅದಕ್ಕೆ ಅಂದು ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಅವರು ಬಿ.ಎ.ಮೊಹಿದಿನ್ ಪರ ಆಡಿದ ಮಾತುಗಳೇ ಸಾಕ್ಷಿಯಾಗಿತ್ತು.

ಎಂದೂ ಅಧಿಕಾರದ ಹಿಂದೆ ಬೀಳದೆ, ಸಿಕ್ಕಿದ ಅಧಿಕಾರವನ್ನು ಅತ್ಯಂತ ಪ್ರಾಮಾಣಿಕವಾಗಿ ಬಳಸಿಕೊಂಡು ಎಂದೂ ಯಾರಿಗೂ ನೋವನ್ನುಂಟು ಮಾಡದೆ, ಭ್ರಷ್ಟಾಚಾರದಿಂದ ದೂರವಿದ್ದು ಕೈ-ಬಾಯಿ ಶುದ್ಧ ಮಾಡಿಕೊಂಡಿದ್ದ ಬಿ.ಎ.ಮೊಹಿದಿನ್ ಮುಸ್ಲಿಮ್ ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಸೃಷ್ಟಿಸಿದರು. ಶಿಕ್ಷಣವಿಲ್ಲದಿದ್ದರೆ ಮುಸ್ಲಿಮ್ ಸಮಾಜಕ್ಕೆ ಉಳಿಗಾಲವಿಲ್ಲ ಎಂದೇ ನಂಬಿದ್ದ ಬಿ.ಎ.ಮೊಹಿದಿನ್ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶದ ಉತ್ಸಾಹಿ ಯುವಕರು, ಉದ್ಯಮಿಗಳನ್ನು ಕಂಡು ಶಿಕ್ಷಣ ಸಂಸ್ಥೆ ಕಟ್ಟಲು ಪ್ರೋತ್ಸಾಹ ನೀಡಿದರು. ಅದರ ಫಲವಾಗಿಯೇ ಇಂದು ಸಮಾಜದ ಲಕ್ಷಾಂತರ ಮುಸ್ಲಿಮ್ ಹುಡುಗಿಯರು ಶೈಕ್ಷಣಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈಯಲು ಸಾಧ್ಯವಾಯಿತು.

ಬ್ಯಾರಿ ಆಂದೋಲನದಲ್ಲೂ ಮುಂಚೂಣಿಯ ಪಾತ್ರ ವಹಿಸಿದ್ದ ಬಿ.ಎ.ಮೊಹಿದಿನ್, ಬ್ಯಾರಿ ಸಾಹಿತ್ಯ ಅಕಾಡಮಿಯ ಸ್ಥಾಪನೆಗೂ ಪ್ರಾಮಾಣಿಕವಾಗಿ ಶ್ರಮಿಸಿದ್ದರು. ಯುವ ಜನಾಂಗಕ್ಕೆ ಸದಾ ಮಾರ್ಗದರ್ಶನ ನೀಡುತ್ತಿದ್ದ ಬಿ.ಎ.ಮೊಹಿದಿನ್ ಯಾರೊಂದಿಗೂ ನಿಷ್ಠುರ ಕಟ್ಟಿಕೊಂಡವರಲ್ಲ. ಸದಾ ಹಸನ್ಮುಖರಾಗಿಯೇ ಇದ್ದ ಬಿ.ಎ. ಮೊಹಿದಿನ್ ತನ್ನ ಬಳಗಕ್ಕೆ ಸೇರ್ಪಡೆಗೊಂಡ ಎಲ್ಲರನ್ನೂ ಸ್ಥಾನಮಾನ ನೋಡದೆ ಹೆಸರು ಹಿಡಿದು ಕರೆಯುವಂತಹ ಆತ್ಮೀಯತೆ ಬೆಳೆಸಿಕೊಂಡಿದ್ದರು.

ಸಿಗಲಿಲ್ಲ ಅರ್ಹತೆಗೆ ತಕ್ಕ ಸ್ಥಾನ 

ಹಿರಿಯ ರಾಜಕೀಯ ನೇತಾರ, ಶಿಕ್ಷಣ ಪ್ರೇಮಿ,  ಮುಸ್ಲಿಂ ಶೈಕ್ಷಣಿಕ ಕ್ರಾಂತಿಯ ರುವಾರಿ ಬಿ.ಎ. ಮೊಹಿದಿನ್‌ರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ .  ಮುಖ್ಯಮಂತ್ರಿ ಹುದ್ದೆಯನ್ನೂ ನಿಭಾಯಿಸಬಲ್ಲಂತಹ ಜಾಣ್ಮೆ, ಪ್ರೌಢಿಮೆ, ಅನುಭವ ಎಲ್ಲವೂ ಇದ್ದ ಮೊಹಿದಿನ್ ಅವರಿಗೆ ರಾಜಕೀಯದಲ್ಲಿ ಈಗ ಅನಿವಾರ್ಯ ಅರ್ಹತೆಗಳಾಗಿಬಿಟ್ಟಿರುವ ವಶೀಲಿಬಾಜಿ , ಕಾಪಟ್ಯ, ಸುಳ್ಳು ಇತ್ಯಾದಿ ಗುಣಗಳು ಸಿದ್ಧಿಸಿರಲಿಲ್ಲ. ಬಹುಶ ಅದೇ ಕಾರಣಕ್ಕೆ ಎಲ್ಲ ಅರ್ಹತೆಗಳಿದ್ದೂ ಅದಕ್ಕೆ ಸೂಕ್ತ ಸ್ಥಾನ ಪಡೆಯುವಲ್ಲಿ ಅವರು ವಿಫಲರಾದರು. ಆದರೆ ಇದ್ದಷ್ಟು ದಿನ ತಾನು ನಂಬಿದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೆ ತಾನು ಮಾಡಿಕೊಂಡು ಬಂದಿದ್ದ ರಾಜಕೀಯದ ಮಾನ ಕಾಪಾಡಿದರು. 

ತನ್ನ ಬದುಕಿನ ನೆನಪುಗಳನ್ನು ಅವರು ಹಂಚಿಕೊಂಡಿದ್ದ ‘ನನ್ನೊಳಗಿನ ನಾನು’ ಕೃತಿ ಇದೇ ತಿಂಗಳು 20 ಕ್ಕೆ ಬಿಡುಗಡೆಯಾಗಲಿದೆ. ಮುಹಮ್ಮದ್ ಕುಳಾಯಿ ಮತ್ತು ಬಿ ಎ ಮುಹಮ್ಮದ್ ಅಲಿ ಅದನ್ನು ನಿರೂಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News