ಒಂದೇ ಕುಟುಂಬದ 11 ಮಂದಿಯ ನಿಗೂಢ ಸಾವು: 200ಕ್ಕೂ ಅಧಿಕ ಜನರ ವಿಚಾರಣೆ
Update: 2018-07-10 20:19 IST
ಹೊಸದಿಲ್ಲಿ, ಜು. 10: ಉತ್ತರ ದಿಲ್ಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿಯ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ನಿಗೂಢವಾಗಿ ಪತ್ತೆಯಾದ ಪ್ರಕರಣದ ಬಗ್ಗೆ 200ಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಪ್ರಾಥಮಿಕ ತನಿಖೆಯಿಂದ 11 ಮಂದಿ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದರೂ ಪೊಲೀಸರು ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗಾಗಿ ಕಾಯುತ್ತಿದ್ದಾರೆ.
ಪ್ರಿಯಾಂಕ ಭಾಟಿಯಾ ಪ್ರಿಯಕರನ ವಿಚಾರಣೆ
ಈ ನಡುವೆ ಮೃತಪಟ್ಟ 33ರ ಹರೆಯದ ಪ್ರಿಯಾಂಕ ಭಾಟಿಯಾ ಅವರ ಪ್ರಿಯಕರನನ್ನು ಮತ್ತೊಮ್ಮೆ ವಿಚಾರಣೆ ನಡೆಸಲಾಗಿದೆ. ಆದರೆ, ಅವರು ಕುಟುಂಬ ನಿರ್ದಿಷ್ಟ ರೀತಿಯ ಆಚರಣೆಗಳಲ್ಲಿ ತೊಡಗಿಕೊಂಡಿತ್ತು ಎಂಬ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಹೇಳಿದ್ದಾರೆ. ಪ್ರಿಯಾಂಕ ಭಾಟಿಯಾಗೆ ಬೇಗನೆ ಸೂಕ್ತ ಜೋಡಿ ಸಿಗಲು ಕಷ್ಟವಾಗುವ ‘ಮಂಗಳಿಕ ದೋಷ’ ಇತ್ತು ಎಂದು ಕೂಡ ಆತ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.