×
Ad

ನಕಲಿ ಸುದ್ದಿ ತಡೆಗೆ ಪತ್ರಿಕೆಯ ಮೊರೆಹೋದ ವಾಟ್ಸ್‌ಆ್ಯಪ್‌

Update: 2018-07-10 20:33 IST

ಹೊಸದಿಲ್ಲಿ, ಜು. 10: ಗುಂಪಿನಿಂದ ಥಳಿಸಿ ಹತ್ಯೆಗೆ ಕಾರಣವಾಗುತ್ತಿರುವ ನಕಲಿ ಸಂದೇಶಗಳ ವಿರುದ್ಧ ಹೋರಾಟ ನಡೆಸುವ ತನ್ನ ಮೊದಲ ಪ್ರಯತ್ನವಾಗಿ ವಾಟ್ಸ್‌ಆ್ಯಪ್ ಜುಲೈ 6ರಂದು ಭಾರತದ ಪ್ರಮುಖ ದಿನ ಪತ್ರಿಕೆಗಳಲ್ಲಿ ಪೂರ್ಣ ಪುಟ ಜಾಹೀರಾತು ಪ್ರಕಟಿಸಿದೆ.

ವಾಟ್ಸ್‌ಆ್ಯಪ್‌ನ 200 ದಶಲಕ್ಷಕ್ಕೂ ಅಧಿಕ ಬಳಕೆದಾರರು ಇರುವ ಅತಿ ದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ ನಕಲಿ ಸಂದೇಶಗಳಿಂದ ಥಳಿಸಿ ಹತ್ಯೆಗೈದ ಘಟನೆಗಳು ಸಂಭವಿಸಿದವು. ಈ ಹಿನ್ನೆಲೆಯಲ್ಲಿ ಭಾರತ ನೋಟಿಸು ಜಾರಿ ಮಾಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ವಾಟ್ಸ್‌ಆ್ಯಪ್‌ಗೆ ಸೂಚಿಸಿತ್ತು. ‘‘ತಪ್ಪು ಮಾಹಿತಿ ವಿರುದ್ಧ ನಾವು ಸಂಘಟಿತರಾಗಿ ಹೋರಾಡಲು ಸಾಧ್ಯ.’’ ಎಂಬ ಇಡೀ ಪೂರ್ಣ ಪುಟದ ಜಾಹೀರಾತು ಕೆಲವು ಪ್ರಮುಖ ಇಂಗ್ಲಿಷ್ ದಿನ ಪತ್ರಿಕೆಗಳಲ್ಲಿ ಕಾಣಿಸಿಕೊಂಡಿತು. ಅನಂತರ ಪ್ರಾದೇಶಿಕ ದಿನಪತ್ರಿಕೆಯಲ್ಲೂ ಪ್ರಕಟವಾಯಿತು.

ಶೇರ್ ಮಾಡುವ ಮೊದಲು ಮಾಹಿತಿ ಪರಿಶೀಲಿಸುವಂತೆ ಹಾಗೂ ನಕಲಿ ಸುದ್ದಿಗಳನ್ನು ಹರಡುವುದರ ಬಗ್ಗೆ ಎಚ್ಚರ ವಹಿಸುವಂತೆ ಜಾಹೀರಾತಿನಲ್ಲಿ ಆಗ್ರಹಿಸಲಾಗಿತ್ತು. ‘‘ನಕಲಿ ಸುದ್ದಿ ಹಾಗೂ ವದಂತಿಗಳನ್ನು ಗುರುತಿಸುವುದು ಹೇಗೆ ಎಂಬ ಬಗ್ಗೆ ನಾವು ಭಾರತದಲ್ಲಿ ಶಿಕ್ಷಣ ಶಿಬಿರ ಆರಂಭಿಸುತ್ತಿದ್ದೇವೆ.’’ ಎಂದು ವಾಟ್ಸ್‌ಆ್ಯಪ್ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಮೊದಲ ಹೆಜ್ಜೆ ಈ ವಿಷಯದ ಕುರಿತು ಇಂಗ್ಲಿಶ್, ಹಿಂದಿ ಹಾಗೂ ಇತರ ಹಲವು ಭಾಷೆಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಎಂದು ಅವರು ಹೇಳಿದ್ದಾರೆ. ಈ ವಾರದಲ್ಲಿ ಪಶ್ಚಿಮದ ಗುಜರಾತ್, ಮಹಾರಾಷ್ಟ್ರ ಹಾಗೂ ರಾಜಸ್ಥಾನ ರಾಜ್ಯಗಳಿಂದ ಉತ್ತರದ ಹೆಚ್ಚು ಜನಪ್ರಿಯ ರಾಜ್ಯವಾದ ಉತ್ತರಪ್ರದೇಶದ ವರೆಗೆ ದೇಶಾದ್ಯಂತ ಪ್ರಾದೇಶಿಕ ದಿನಪತ್ರಿಕೆಯಲ್ಲಿ ಇದೇ ರೀತಿಯ ಜಾಹೀರಾತು ಪ್ರಕಟಿಸುವ ಉದ್ದೇಶವನ್ನು ವಾಟ್ಸ್ ಆ್ಯಪ್ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News