ರನ್‌ವೇಯಿಂದ ಜಾರಿದ ವಿಮಾನ, ತಪ್ಪಿದ ಭಾರೀ ದುರಂತ

Update: 2018-07-10 15:13 GMT

ಮುಂಬೈ, ಜು. 10: ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳವಾರ ಮುಂಬೈಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ಇಳಿಯುತ್ತಿದ್ದಂತೆ ಜಾರಿ ಮುಂದೆ ಚಲಿಸಿದ ಘಟನೆ ನಡೆದಿದೆ. ಆದರೆ, ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ವಿಮಾನಕ್ಕಾಗಲಿ, ರನ್‌ವೇಗಾಗಲಿ ಯಾವುದೇ ಹಾನಿ ಉಂಟಾಗಿಲ್ಲ ಎಂದು ವಿಮಾನ ಸಂಸ್ಥೆಯ ಹೇಳಿಕೆ ತಿಳಿಸಿದೆ. ವಿಜಯವಾಡದಿಂದ ಮುಂಬೈಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 2.50ಕ್ಕೆ ಮುಂಬೈ ವಿಮಾನದಲ್ಲಿ ಇಳಿಯಿತು. ರನ್‌ವೇ 27 ಅನ್ನು ಮುಚ್ಚಿದ್ದ ಕಾರಣಕ್ಕೆ ಪರ್ಯಾಯ ರನ್‌ವೇ 14ರಲ್ಲಿ ಇಳಿಯಿತು. ಆದರೆ, ವಿಮಾನ ರನ್‌ವೇಯಲ್ಲಿ ನಿಲ್ಲದೆ, ಅದಕ್ಕಿಂತ 10 ಅಡಿ ಮುಂದಕ್ಕೆ ಜಾರಿ ಹೋಯಿತು ಎಂದು ಹೇಳಿಕೆ ತಿಳಿಸಿದೆ.

ರನ್‌ವೇ 27ರಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿದ್ದುದರಿಂದ ಎರಡನೇ ರನ್‌ವೇ 14ರಲ್ಲಿ ವಿಮಾನ ಇಳಿಸಲಾಯಿತು ಎಂದು ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಸರಿಯಾಗಿ ಭೂಸ್ಪರ್ಶ ಮಾಡಿತು. ವಿಮಾನಕ್ಕೆ ಗರಿಷ್ಠ ಬ್ರೇಕ್ ಹಾಕಲಾಯಿತು. ಆದರೆ ಭಾರೀ ಮಳೆಯಿಂದ ರನ್‌ವೇ ಜಾರುವ ಸ್ಥಿತಿಯಲ್ಲಿದ್ದುದರಿಂದ ವಿಮಾನ ಸ್ಟಾಪ್‌ವೇ ವರೆಗೆ ಜಾರಿ, ಬಳಿಕ ನಿಂತಿತು ಎಂದು ವಿಮಾನ ನಿಲ್ದಾಣ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News