ಸಾವಿನ 18 ವರ್ಷಗಳ ಬಳಿಕ ಸ್ವಾತಂತ್ರ್ಯ ಹೋರಾಟಗಾರನಿಗೆ ಸಿಕ್ಕಿದ ನ್ಯಾಯ

Update: 2018-07-10 15:41 GMT

ಚಂಡಿಗಡ,ಜು.10: ಹರ್ಯಾಣದ ಸ್ವಾತಂತ್ರ್ಯ ಯೋಧ ನೋಬತ್ ಸಿಂಗ್ ಅವರಿಗೆ ಕೊನೆಗೂ ನ್ಯಾಯ ದೊರಕಿದೆ. ಆದರೆ ತುಂಬ ವಿಳಂಬವಾಗಿ ದೊರಕಿದೆ,ಏಕೆಂದರೆ 18ವರ್ಷಗಳ ಹಿಂದೆಯೇ ಅವರು ಇಹಲೋಕವನ್ನು ತೊರೆದಿದ್ದಾರೆ.

ಅಬಕಾರಿ ಇಲಾಖೆಯು ತನ್ನ ವಿರುದ್ಧ ಅಬಕಾರಿ ಸುಂಕ ಬಾಕಿ ವಸೂಲಿ ಕ್ರಮಕ್ಕೆ ಮುಂದಾಗಿದ್ದನ್ನು ಸಿಂಗ್ 1991ರಲ್ಲಿ ಪಂಜಾಬ್ ಮತ್ತ ಹರ್ಯಾಣ ಉಚ್ಚ ನ್ಯಾಯಲಯದಲ್ಲಿ ಪ್ರಶ್ನಿಸಿದ್ದರು. ಇದೀಗ ವಿಭಾಗೀಯ ಪೀಠವು ಪ್ರಕರಣದ ತೀರ್ಪನ್ನು ಪ್ರಕಟಿಸಿದ್ದು,ಸಿಂಗ್ ಅವರ ಉತ್ತರಾಧಿಕಾರಿಗಳಿಂದ 1.60 ಲ.ರೂ. ಅಬಕಾರಿ ಬಾಕಿಯನ್ನು ವಸೂಲು ಮಾಡುವಂತಿಲ್ಲ ಎಂದು ಆದೇಶಿಸಿದೆ. 2000,ಡಿ.12ರಂದು ಸಿಂಗ್ ನಿಧನರಾಗಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಸಿಂಗ್ ಅದಕ್ಕಾಗಿ ಏಳೂವರೆ ವರ್ಷ ಜೈಲುಶಿಕ್ಷೆಯನ್ನೂ ಅನುಭವಿಸಿದ್ದರು.

ಭಿವಾನಿ ಮೂಲದ ಸಿಂಗ್ 1969ರಲ್ಲಿ ತಂಬಾಕು ಎಲೆಗಳ ಸಂಸ್ಕರಣ ಉದ್ಯಮವನ್ನು ಆರಂಭಿಸಿದ್ದರು. ಆದರೆ ಕೇಂದ್ರ ಅಬಕಾರಿ ಇಲಾಖೆಯ ಅಧಿಕಾರಿಗಳ ಕಿರುಕುಳ ಮತ್ತು ಲಂಚದ ಬೇಡಿಕೆಗಳಿಂದಾಗಿ ಬೇಸತ್ತು ಒಂದು ವರ್ಷದಲ್ಲಿಯೇ ಅದನ್ನು ಮುಚ್ಚುವಂತಾಗಿತ್ತು.

ಅಬಕಾರಿ ಇನ್ಸ್‌ಪೆಕ್ಟರ್ ಎಸ್.ಕೆ.ಖನ್ನಾ 1969ರಲ್ಲಿ 200 ರೂ.ಲಂಚಕ್ಕಾಗಿ ಸಿಂಗ್ ಅವರನ್ನು ಪೀಡಿಸಿದ್ದು, ಇದರ ವಿರುದ್ಧ ಅವರು ಸಿಬಿಐಗೆ ದೂರು ಸಲ್ಲಿಸಿದ್ದರು. ಖನ್ನಾ ಲಂಚ ಸ್ವೀಕರಿಸುತ್ತಿದ್ದಾಗಲೇ ದಾಳಿ ನಡೆಸಿ ರೆಡ್‌ಹ್ಯಾಂಡ್ ಆಗಿ ಹಿಡಿಯಲಾಗಿತ್ತು.

 ಇದು ಇಲಾಖೆಯ ಇತರ ಅಧಿಕಾರಿಗಳನ್ನು ಕೆರಳಿಸಿತ್ತು ಮತ್ತು ಸಿಂಗ್ ಅವರಿಗೆ ಕಿರುಕುಳಗಳು ಹೆಚ್ಚತೊಡಗಿದ್ದವು. ಸಿಂಗ್ ಅನುಪಸ್ಥಿತಿಯಲ್ಲಿ ಅವರ ಉದ್ಯಮದ ಮೇಲೆ ದಾಳಿ ನಡೆಸಿದ್ದ ಅಬಕಾರಿ ಅಧಿಕಾರಿಗಳು ಗೋದಾಮುಗಳಲ್ಲಿದ್ದ,ಆಗ 1.80 ಲ.ರೂ.ವೌಲ್ಯದ ತಂಬಾಕು ಎಲೆಗಳು ಮತ್ತು ಅವುಗಳನ್ನು ತುಂಬಿಸಿಟ್ಟ್ಟಿದ್ದ 3000 ಗೋಣಿಚೀಲಗಳನ್ನು ವಶಪಡಿಸಿಕೊಂಡಿದ್ದರು. ಸಿಂಗ್‌ರಿಂದ ಬರಬೇಕಾಗಿರುವ ಅಬಕಾರಿ ಸುಂಕದ ಬಾಕಿ ವಸೂಲಾತಿಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ತಾನು ಯಾವುದೇ ಬಾಕಿಯನ್ನು ಉಳಿಸಿಲ್ಲ ಎಂದು ಸಿಂಗ್ ತಿಳಿಸಿದ್ದರೂ 1.60 ಲ.ರೂ.ಬಾಕಿ ಪಾವತಿಸುವಂತೆ ಇಲಾಖೆಯು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅವರು ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News