ಜಗತ್ತಿನ 4 ಮಕ್ಕಳ ಪೈಕಿ 1 ಸಂಘರ್ಷ ಪೀಡಿತ ದೇಶದಲ್ಲಿ: ವಿಶ್ವಸಂಸ್ಥೆ

Update: 2018-07-10 15:57 GMT

 ವಿಶ್ವಸಂಸ್ಥೆ, ಜು. 10: ಜಗತ್ತಿನ ಮಕ್ಕಳ ಪೈಕಿ ಕಾಲು ಭಾಗ, ಅಂದರೆ ಸುಮಾರು 53.5 ಕೋಟಿ ಮಕ್ಕಳು ಸಂಘರ್ಷ ಅಥವಾ ವಿಪತ್ತು ಪೀಡಿತ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್‌ನ ಮುಖ್ಯಸ್ಥೆ ಹೆನ್ರೀಟಾ ಫೋರ್ ಸೋಮವಾರ ಹೇಳಿದ್ದಾರೆ.

ಜಗತ್ತಿನ ನಾಲ್ವರು ಮಕ್ಕಳ ಪೈಕಿ 1 ಮಗು ಸಂಘರ್ಷ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ‘ಊಹೆಗೂ ನಿಲುಕದ ಸಂಗತಿ’ಯಾಗಿದೆ ಎಂದು ಮಕ್ಕಳು ಮತ್ತು ಸಶಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು ನುಡಿದರು.

ಯಮನ್, ಮಾಲಿ ಮತ್ತು ದಕ್ಷಿಣ ಸುಡಾನ್ ಸೇರಿದಂತೆ ಸಂಘರ್ಷ ಪೀಡಿತ ದೇಶಗಳಲ್ಲಿನ ಮಕ್ಕಳು ಮತ್ತು ಯುವಜನರ ಬದುಕು ನುಚ್ಚುನೂರಾಗುತ್ತಿದೆ ಎಂದು ಅವರು ಹೇಳಿದರು.

ಕಾಳಗ ನಡೆಸಲು ನೇಮಕಗೊಳ್ಳುತ್ತಿರುವ ಮಕ್ಕಳು, ನೆಲಬಾಂಬ್ ಸ್ಫೋಟಿಸಿ ಅಥವಾ ಶಾಲೆಗಳ ಮೇಲೆ ನಡೆಯುವ ದಾಳಿಗಳಲ್ಲಿ ಸಾಯುವ ಮಕ್ಕಳ ಬಗ್ಗೆಯೂ ಅವರು ಮಾತನಾಡಿದರು.

‘‘ಈ ಮಕ್ಕಳು ತಮ್ಮ ಭವಿಷ್ಯದಲ್ಲಿ ಮಾತ್ರವಲ್ಲ, ತಮ್ಮ ದೇಶಗಳ ಭವಿಷ್ಯದಲ್ಲೂ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ’’ ಎಂದು ಹೆನ್ರೀಟಾ ವಿಷಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News