ನಡಾಲ್ ಕ್ವಾರ್ಟರ್ ಪೈನಲ್‌ಗೆ

Update: 2018-07-10 18:22 GMT

ಲಂಡನ್, ಜು.10: ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಈ ಟೂರ್ನಿಯಲ್ಲಿ ಏಳು ವರ್ಷಗಳ ಬಳಿಕ ಅಂತಿಮ-8ರ ಸುತ್ತು ತಲುಪಿರುವ ನಡಾಲ್ ಪ್ರಶಸ್ತಿ ಕನಸು ಈಡೇರಿಸಿಕೊಳ್ಳುವತ್ತ ಚಿತ್ತವಿರಿಸಿದ್ದಾರೆ.

ಟೆನಿಸ್‌ನ ಓರ್ವ ಶ್ರೇಷ್ಠ ಆಟಗಾರ ನಡಾಲ್ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಝೆಕ್ ಗಣರಾಜ್ಯದ ಜಿರಿ ವೆಸ್ಲೆ ಅವರನ್ನು 6-3, 6-3, 6-4 ಸೆಟ್‌ಗಳಿಂದ ಸೋಲಿಸಿದರು. 2011ರ ಬಳಿಕ ವಿಂಬಲ್ಡನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದರು.

   ವಿಶ್ವದ ನಂ.93ನೇ ಆಟಗಾರನನ್ನು ಮಣಿಸಿದ ನಡಾಲ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 35ನೇ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಸ್ಪೇನ್ ಆಟಗಾರ ನಡಾಲ್ ಮುಂದಿನ ಸುತ್ತಿನಲ್ಲಿ ಅರ್ಜೆಂಟೀನದ ಜುಯಾನ್ ಡೆಲ್ ಪೊಟ್ರೊ ಅಥವಾ ಫ್ರಾನ್ಸ್ ನ ಶ್ರೇಯಾಂಕರಹಿತ ಗಿಲ್ಲೆಸ್ ಸಿಮೊನ್‌ರನ್ನು ಎದುರಿಸಲಿದ್ದಾರೆ. ಜಪಾನ್ ಆಟಗಾರ ಕೀ ನಿಶಿಕೊರಿ ಲಾಟ್ವಿಯದ ಕ್ವಾಲಿಫೈಯರ್ ಎರ್ನೆಸ್ಟ್ ಗುಲ್ಬಿಸ್‌ರನ್ನು 4-6, 7-6(7/5), 7-6(12/10), 6-1 ಸೆಟ್‌ಗಳಿಂದ ಸೋಲಿಸಿದ್ದಾರೆ. ಈ ಮೂಲಕ ಮೊದಲ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. 28ರ ಹರೆಯದ ನಿಶಿಕೊರಿ 1995ರ ಬಳಿಕ ವಿಂಬಲ್ಡನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ ಜಪಾನ್‌ನ ಮೊದಲ ಆಟಗಾರನಾಗಿದ್ದಾರೆ. ಶುರೊ ಮಟ್ಸುಕಾ ಈ ಸಾಧನೆ ಮಾಡಿದ್ದಾರೆ. ನಿಶಿಕೊರಿ ಮುಂದಿನ ಸುತ್ತಿನಲ್ಲಿ ಮೂರು ಬಾರಿಯ ಚಾಂಪಿಯನ್ ಜೊಕೊವಿಕ್ ಅಥವಾ ರಶ್ಯದ ಕರೆನ್ ಖಚನೊವ್‌ರನ್ನು ಎದುರಿಸಲಿದ್ದಾರೆ. ಅಮೆರಿಕದ 9ನೇ ಶ್ರೇಯಾಂಕದ ಜಾನ್ ಇಸ್ನೆರ್ ಗ್ರೀಕ್ ಯುವ ಆಟಗಾರ ಸ್ಟೆಫಾನೊಸ್ ಸಿಟ್‌ಸಿಪಾಸ್‌ರನ್ನು 6-4, 7-6(10/8), 7-6(7/4)ಸೆಟ್‌ಗಳಿಂದ ಸೋಲಿಸಿದ್ದಾರೆ. ಈ ಗೆಲುವಿನೊಂದಿಗೆ ಮೊದಲ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಅಂತಿಮ-8ರ ಹಂತ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News