ಉನ್ನಾವೊ ಅತ್ಯಾಚಾರ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆ: ಬಿಜೆಪಿ ಶಾಸಕ ಸೆಂಗರ್ ಆರೋಪಿ

Update: 2018-07-11 15:16 GMT

ಹೊಸದಿಲ್ಲಿ, ಜು.11: ಉನ್ನಾವೊ ಅತ್ಯಾಚಾರ ಪ್ರಕರಣದ ಕುರಿತು ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್‌ನನ್ನು ಆರೋಪಿ ಎಂದು ಹೆಸರಿಸಲಾಗಿದೆ. ಈ ಪ್ರಕರಣದಲ್ಲಿ ಶನಿವಾರ ಸಲ್ಲಿಸಿರುವ ಪ್ರಥಮ ಆರೋಪಪಟ್ಟಿಯಲ್ಲಿ, ಶಾಸಕನಿಂದ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಹೇಳಲಾಗಿರುವ ಬಾಲಕಿಯ ತಂದೆಯನ್ನು ಹತ್ಯೆ ಮಾಡಿದ ಆರೋಪಿಗಳೆಂದು ಶಾಸಕನ ಸಹೋದರ ಹಾಗೂ ಇತರ ನಾಲ್ವರನ್ನು ಹೆಸರಿಸಲಾಗಿದೆ.

 ಕಳೆದ ವರ್ಷ ಉದ್ಯೋಗಕ್ಕೆ ಶಿಫಾರಸು ಮಾಡಬೇಕೆಂದು ಕೋರಿ ತನ್ನ ಸಂಬಂಧಿಯೊಂದಿಗೆ ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್‌ನನ್ನು ಭೇಟಿಯಾಗಲು ತೆರಳಿದ್ದ ಸಂದರ್ಭ ಶಾಸಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 17ರ ಹರೆಯದ ಬಾಲಕಿ ಆರೋಪಿಸಿದ್ದಳು. ಈ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆಯಿಂದ ಬೇಸತ್ತು ಮುಖ್ಯಮಂತ್ರಿ ಆದಿತ್ಯನಾಥರ ಸರಕಾರಿ ನಿವಾಸದೆದುರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಕ್ರಮ ಕೈಗೊಳ್ಳಲು ನಿರಾಕರಿಸಿದ ಮೇಲಧಿಕಾರಿಗಳಿಗೆ ದೂರು ನೀಡಿದ್ದಳು. ಈ ಮಧ್ಯೆ, ಶಾಸಕ ಅತ್ಯಾಚಾರ ಎಸಗಿರುವ ಬಗ್ಗೆ ದೂರು ದಾಖಲಿಸಲು ಬಾಲಕಿಯ ತಂದೆ ಎಪ್ರಿಲ್ 3ರಂದು ದಿಲ್ಲಿಯಿಂದ ಉತ್ತರಪ್ರದೇಶದ ನ್ಯಾಯಾಲಯಕ್ಕೆ ಆಗಮಿಸಿದ್ದರು. ಇವರ ಮೇಲೆ ಮನೆಯೆದುರೇ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಶಸ್ತ್ತ್ರಾಸ್ತ್ರ ಕಾಯ್ದೆಯಡಿ ಜೈಲಿಗಟ್ಟಲಾಗಿತ್ತು. ಜೈಲಿನಲ್ಲಿ ಸೂಕ್ತ ಚಿಕಿತ್ಸೆ ದೊರಕದೆ ಎಪ್ರಿಲ್ 8ರಂದು ಮೃತಪಟ್ಟಿದ್ದರು.

ಸಿಬಿಐ ಸಲ್ಲಿಸಿರುವ 19 ಪುಟಗಳ ಚಾರ್ಜ್‌ಶೀಟ್‌ನಲ್ಲಿ 76 ಸಾಕ್ಷಿಗಳು ಹಾಗೂ 53 ಪುರಾವೆ ಸಹಿತ ಸಾಕ್ಷಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News