ತೈಲ ಆಮದು ಮಾಡಿಕೊಳ್ಳದಿದ್ದರೆ ವಿಶೇಷ ಸೌಲಭ್ಯ ನೀಡುವುದಿಲ್ಲ: ಭಾರತಕ್ಕೆ ಇರಾನ್ ಎಚ್ಚರಿಕೆ

Update: 2018-07-11 15:22 GMT

ಹೊಸದಿಲ್ಲಿ, ಜು.11: ಚಬಹರ್ ಬಂದರು ವಿಸ್ತರಣೆ ಯೋಜನೆಯಲ್ಲಿ ಹೂಡಿಕೆ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸದಿರುವ ಕಾರಣಕ್ಕೆ ಭಾರತವನ್ನು ಟೀಕಿಸಿರುವ ಇರಾನ್, ಭಾರತವು ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಅದಕ್ಕೆ ನೀಡಿರುವ ವಿಶೇಷ ಸೌಲಭ್ಯವನ್ನೂ ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದೆ.

ಇರಾನ್‌ನಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಿ ಭಾರತವು ಸೌದಿ ಅರೇಬಿಯ, ರಶ್ಯಾ, ಇರಾಕ್ ಮತ್ತು ಯುಎಸ್‌ನಿಂದ ತೈಲ ಆಮದು ಮಾಡಿಕೊಂಡರೆ ಇರಾನ್ ಭಾರತಕ್ಕೆ ನೀಡಿರುವ ವಿಶೇಷ ಸೌಲಭ್ಯವನ್ನು ಸ್ಥಗಿತಗೊಳಿಸಲಿದೆ ಎಂದು ಇರಾನ್‌ನ ಸಹಾಯಕ ರಾಯಬಾರಿ ಮತ್ತು ಸರಕಾರಿ ಪ್ರತಿನಿಧಿ ಮಸ್ಸೂದ್ ರೆಝ್ವೆನಿಯನ್ ರಹಗಿ ತಿಳಿಸಿದ್ದಾರೆ. ಚಬಹರ್ ಬಂದರನ್ನು ವಿಸ್ತರಿಸುವ ಯೋಜನೆಯಲ್ಲಿ ಹೂಡಿಕೆ ಮಾಡುವ ಭರವಸೆಯನ್ನು ಭಾರತ ಈವರೆಗೂ ಈಡೇರಿಸದಿರುವುದು ದುರದೃಷ್ಟಕರ. ಈ ಯೋಜನೆ ದೇಶದ ಪಾಲಿಗೆ ಮುಖ್ಯ ಎಂದು ಭಾವಿಸುವುದಾದರೆ ಭಾರತ ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ತನ್ನ ನೆಲದ ಮೂಲಕ ವ್ಯಾಪಾರ ನಡೆಸಲು ಪಾಕಿಸ್ತಾನವು ಭಾರತಕ್ಕೆ ಅನುಮತಿ ನೀಡದಿರುವ ಹಿನ್ನೆಲೆಯಲ್ಲಿ ಚಬಹರ್ ಬಂದರು, ಮಧ್ಯ ಏಶ್ಯಾ ದೇಶಗಳ ಜೊತೆ ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನ ವ್ಯಾಪಾರ ನಡೆಸಲು ಸುವರ್ಣಾವಕಾಶವನ್ನು ತೆರೆದಿಡುವ ಮುಖ್ಯದ್ವಾರ ಎಂದು ಪರಿಗಣಿಸಲಾಗಿದೆ. ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನದ ಮೂಲಕ ಹಾದುಹೋಗುವ ಸಾರಿಗೆ ಮತ್ತು ಸಾಗಾಟ ಮಾರ್ಗವನ್ನು ನಿರ್ಮಿಸುವ ಒಪ್ಪಂದಕ್ಕೆ ಮೂರು ದೇಶಗಳು ಸಹಿ ಹಾಕಿದ್ದವು. ಈ ಯೋಜನೆಯಲ್ಲಿ ಚಬಹರ್ ಬಂದರನ್ನು ಇರಾನ್‌ನಲ್ಲಿ ಸಮುದ್ರ ಸಾರಿಗೆಯ ಪ್ರಮುಖ ಭಾಗವಾಗಿ ಈ ಒಪ್ಪಂದಲ್ಲಿ ತಿಳಿಸಲಾಗಿತ್ತು. ನವೆಂಬರ್ 4ರ ಒಳಗಾಗಿ ಇರಾನ್ ಜೊತೆಗಿನ ತೈಲ ಆಮದು ಪ್ರಮಾಣವನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಭಾರತ ಹಾಗೂ ಇತರ ರಾಷಟ್ಗೆಳಿಗೆ ಅಮೆರಿಕ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News