ಯುಟ್ಯೂಬ್ ವಿಡಿಯೋದಿಂದ ಕಲ್ಯಾಣ್ ಜ್ಯುವೆಲ್ಲರ್ಸ್ ಗೆ 500 ಕೋಟಿ ರೂ. ನಷ್ಟ: ಆರೋಪ

Update: 2018-07-11 17:06 GMT

ಕೊಚ್ಚಿ, ಜು.11: ಯುಟ್ಯೂಬ್ ನಲ್ಲಿದ್ದ ನಕಲಿ ಸುದ್ದಿಯೊಂದರಿಂದಾಗಿ ಸಂಸ್ಥೆಗೆ 500 ಕೋಟಿ ರೂ.ಗಳು ನಷ್ಟವುಂಟಾಗಿದೆ ಎಂದು ಕಲ್ಯಾಣ್ ಜ್ಯುವೆಲ್ಲರ್ಸ್ ಆರೋಪಿಸಿದ್ದು, ಸಾಮಾಜಿಕ ಜಾಲತಾಣದ ಮೇಲ್ವಿಚಾರಣೆ ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ.

ಶೋರೂಂನಲ್ಲಿ ನಕಲಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ನಕಲಿ ಸುದ್ದಿಯ ವಿಡಿಯೋವೊಂದು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿತ್ತು. ಕಲ್ಯಾಣ್ ಜ್ಯುವೆಲ್ಲರ್ಸ್ ವಿರುದ್ಧದ ಅಪಪ್ರಚಾರಕ್ಕಾಗಿ ಇದನ್ನು ಬಳಸಲಾಗಿದೆ. ಈ ಅಪಪ್ರಚಾರದಿಂದಾಗಿ ಸಂಸ್ಥೆಗೆ 500 ಕೋಟಿ ರೂ. ನಷ್ಟವಾಗಿದೆ ಎಂದು ಹೈಕೋರ್ಟ್ ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಕುವೈತ್ ನಲ್ಲಿರುವ ತನ್ನ ಮಳಿಗೆಯಲ್ಲಿ ನಡೆದ ಸಾಮಾನ್ಯ ಪರಿಶೀಲನೆಯನ್ನು 'ದಾಳಿ' ಎಂಬಂತೆ ಬಿಂಬಿಸಲಾಗಿದೆ. ಕಲ್ಯಾಣ್ ಜ್ಯುವೆಲ್ಲರಿಯ ಮೇಲೆ ದಾಳಿ ನಡೆದು ನಕಲಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಹಾಗೆ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಆದರೆ ದೇಶದಾದ್ಯಂತ ಇರುವ ಎಲ್ಲಾ ಚಿನ್ನಾಭರಣ ಮಳಿಗೆಗಳಲ್ಲಿ ಕುವೈತ್ ಅಧಿಕಾರಿಗಳು ನಡೆಸಿದ ಸಾಮಾನ್ಯ ತಪಾಸಣೆ ಇದಾಗಿದೆ. ತಪಾಸಣೆಯ ಭಾಗವಾಗಿ ಅಧಿಕಾರಿಗಳು ಮಾದರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಇದನ್ನು ಕಿಡಿಗೇಡಿಗಳು ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ನಕಲಿ ಚಿನ್ನ ಮಾರಲಾಗುತ್ತಿದೆ. ಅಧಿಕಾರಿಗಳು ನಕಲಿ ಚಿನ್ನ ವಶಪಡಿಸಿಕೊಂಡಿದ್ದಾರೆ ಎಂದು ತಿರುಚಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News