ಮೋದಿಯವರೇ ನನ್ನ ಧ್ವನಿಯನ್ನು ಉಡುಗಿಸಲು ಸಾಧ್ಯವಿಲ್ಲ: ಯೋಗೇಂದ್ರ ಯಾದವ್

Update: 2018-07-11 17:34 GMT

ಹೊಸದಿಲ್ಲಿ, ಜು.11: ಸಹೋದರಿಯ ಆಸ್ಪತ್ರೆಯ ಮೇಲೆ ತೆರಿಗೆ ದಾಳಿ ನಡೆಸುವ ಮೂಲಕ ಕೇಂದ್ರದ ಮೋದಿ ಸರಕಾರ ನನ್ನನ್ನು ಹೆದರಿಸಲು ಮುಂದಾಗಿದೆ. ಆದರೆ ಇಂಥ ಬೆದರಿಕೆ ಕ್ರಮಗಳಿಗೆ ನಾನು ಬಗ್ಗುವವನಲ್ಲ ಎಂದು ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಈ ಕುರಿತು ಮಾಡಿರುವ ಸರಣಿ ಟ್ವೀಟ್‌ನಲ್ಲಿ ಯಾದವ್, ದಿಲ್ಲಿಯಿಂದ ನೂರಕ್ಕಿಂತಲೂ ಅಧಿಕ ಅಧಿಕಾರಿಗಳು ಹರ್ಯಾಣದ ರೆವಾರಿಯಲ್ಲಿ ನನ್ನ ಸಹೋದರಿ ನಡೆಸುತ್ತಿರುವ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ನನ್ನ ಸಂಬಂಧಿಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಮತ್ತು ಆಸ್ಪತ್ರೆಯನ್ನು ಮುಚ್ಚಿದ್ದಾರೆ. ಇದು ನನ್ನನ್ನು ಹೆದರಿಸಲು ಮಾಡಿರುವ ಪ್ರಯತ್ನ ಎಂಬುದು ಸ್ಪಷ್ಟ. ಆದರೆ ಮೋದಿಯವರೇ ನೀವು ಈ ಕ್ರಮಗಳಿಂದ ನನ್ನ ಧ್ವನಿಯನ್ನು ಉಡುಗಿಸಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. 2015ರಲ್ಲಿ ಆಮ್ ಆದ್ಮಿ ಪಕ್ಷವನ್ನು ತೊರೆದ ಯೋಗೇಂದ್ರ ಯಾದವ್ ನಂತರ ರೈತರನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ರೈತರ ಬೆಳೆಗೆ ಉತ್ತಮ ಬೆಲೆಯನ್ನು ನೀಡಬೇಕೆಂದು ಆಗ್ರಹಿಸಿ ಯಾದವ್ ಅಭಿಯಾನವನ್ನು ಆರಂಭಿಸಿದ್ದಾರೆ. ರೈತರನ್ನು ಒಗ್ಗೂಡಿಸುವ ಸಲುವಾಗಿ ನಡೆಯಲಿರುವ ಒಂಬತ್ತು ದಿನಗಳ ಪ್ರತಿಭಟನಾ ನಡೆಯು ಬಿಜೆಪಿ ಮುನಿಸಿಗೆ ಕಾರಣವಾಗಿದೆ ಎಂದು ಯಾದವ್ ತಿಳಿಸಿದ್ದಾರೆ. ಈ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ, ತೆರಿಗೆ ಇಲಾಖೆಯು ತನ್ನ ಕೆಲಸವನ್ನು ಮಾಡಿದೆ. ಐಟಿ ದಾಳಿಗೂ ಯಾದವ್ ನಡೆಸುತ್ತಿರುವ ಚಳುವಳಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News