ಭೂಸ್ಪರ್ಶ ಮಾಡಿದ ಮೇಲೆ ರೈಲಾಗಿ ಬದಲಾಗುವ ವಿಮಾನವಿದು!

Update: 2018-07-12 17:01 GMT

ವಾಶಿಂಗ್ಟನ್, ಜು. 12: ಅದು ಆಧುನಿಕ ವಿನ್ಯಾಸದ ವಿಮಾನ. ರನ್‌ವೇಯಲ್ಲಿ ಭೂಸ್ಪರ್ಶ ಮಾಡುತ್ತದೆ, ತನ್ನ ರೆಕ್ಕೆಗಳನ್ನು ಒಳಗೆ ಎಳೆದುಕೊಳ್ಳುತ್ತದೆ. ನಂತರ ಅದು ರೈಲಿನ ರೂಪಕ್ಕೆ ಪರಿವರ್ತನೆಗೊಳ್ಳುತ್ತದೆ ಹಾಗೂ ರೈಲು ಹಳಿಗಳತ್ತ ಚಲಿಸುತ್ತದೆ. ಅಂತಿಮವಾಗಿ ನಿಮ್ಮ ಸಮೀಪದ ರೈಲು ನಿಲ್ದಾಣದಲ್ಲಿ ನಿಮ್ಮನ್ನು ಇಳಿಸುತ್ತದೆ...

ಹಾಲಿವುಡ್‌ನ ಸೈ-ಫೈ (ವೈಜ್ಞಾನಿಕ ಚಿತ್ರ) ಚಿತ್ರವೊಂದರ ಕಲ್ಪನೆಯನ್ನು ಇದು ಹೋಲುತ್ತದೆಯಲ್ಲವೇ?

ಆದರೆ, ಇದು ವೈಜ್ಞಾನಿಕ ಚಿತ್ರದ ಕಲ್ಪನೆಯಲ್ಲ. ಶೀಘ್ರದಲ್ಲೇ ಅವತರಿಸಲಿರುವ ವಾಸ್ತವಿಕ ತಂತ್ರಜ್ಞಾನ!

ಫ್ರಾನ್ಸ್ ಉದ್ಯಮಿ ವೌರಿಸ್ ರಿಕ್ಕಿ ಈ ವಿನೂತನ ಕಲ್ಪನೆಯನ್ನು ಬೋಯಿಂಗ್ ಕೊ. ಮತ್ತು ಇತರ ವಿಮಾನ ನಿರ್ಮಾಣ ಕಂಪೆನಿಗಳ ಮುಂದಿಟ್ಟಿದ್ದಾರೆ.

‘ಲಿಂಕ್ ಆ್ಯಂಡ್ ಫ್ಲೈ’ ಎನ್ನುವುದು ‘ಅಕ್ಕಾ ಟೆಕ್ನಾಲಜಿ’ಯ ನೂತನ ವಿಮಾನ ವಿನ್ಯಾಸವಾಗಿದೆ. ಈ ಮಾದರಿಯ ವಿಮಾನಗಳು ವಿಮಾನ ನಿಲ್ದಾಣಗಳಲ್ಲಿ ರೈಲುಗಳಾಗಿ ಮತ್ತು ವಿಮಾನಗಳಾಗಿ ಪರಿವರ್ತನೆಗೊಳ್ಳುತ್ತವೆ. ಇದೇ ವಿಮಾನಗಳು ರೈಲುಗಳಾಗಿ ಪ್ರಯಾಣಿಕರ ಸಮೀಪದ ರೈಲು ನಿಲ್ದಾಣಗಳಿಂದ ಕರೆತರುತ್ತವೆ ಹಾಗೂ ಅಲ್ಲಿಗೆ ಕರೆದುಕೊಂಡು ಹೋಗಿ ಬಿಡುತ್ತವೆ.

‘‘ಕಾರುಗಳು ಇಲೆಕ್ಟ್ರಿಕ್ ಮತ್ತು ಸ್ವಯಂಚಾಲಿತಗೊಂಡ ಬಳಿಕ, ಮುಂದಿನ ದೊಡ್ಡ ಪರಿವರ್ತನೆಯ ಸರದಿ ವಿಮಾನಗಳದ್ದು’’ ಎಂದು ಅಕ್ಕಾ ಟೆಕ್ನಾಲಜಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೌರಿಸ್ ರಿಕ್ಕಿ ಹೇಳುತ್ತಾರೆ.

ಈ ಕಲ್ಪನೆಯ 3ಡಿ ವೀಡಿಯೊವೊಂದನ್ನು ಕಂಪೆನಿಯು ಬಿಡುಗಡೆ ಮಾಡಿದೆ.

ಭವಿಷ್ಯದ ವಿಮಾನದ ವಿನ್ಯಾಸ

‘ಅಕ್ಕಾ’ ಕಂಪೆನಿಯ ಭವಿಷ್ಯದ ವಿಮಾನದ ಕಲ್ಪನೆ ಹೀಗಿದೆ.

ಪ್ರಯಾಣಿಕರು ತಮ್ಮ ಸಮೀಪದ ರೈಲು ನಿಲ್ದಾಣಗಳಲ್ಲಿ ರೈಲಿನಂಥ ಟ್ಯೂಬ್‌ಗೆ ಹತ್ತುತ್ತಾರೆ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ವೇಳೆ ಭದ್ರತಾ ತಪಾಸಣೆಯಾಗಿ ಅವರ ಕಣ್ಣಿನ ರೆಟಿನಾಗಳನ್ನು ಸ್ಕಾನ್ ಮಾಡಲಾಗುತ್ತದೆ.

ವಿಮಾನ ನಿಲ್ದಾಣದಲ್ಲಿ ಹಾರುವುದಕ್ಕಾಗಿ ಅದಕ್ಕೆ ರೆಕ್ಕೆಗಳನ್ನು ಜೋಡಿಸಲಾಗುತ್ತದೆ ಹಾಗೂ ವಿಮಾನ ಮೇಲೆ ಹಾರುತ್ತದೆ. ಇನ್ನೊಂದು ವಿಮಾನ ನಿಲ್ದಾಣದಲ್ಲಿ ಇಳಿಯುವ ವಿಮಾನ ರೈಲಾಗಿ ಪರಿವರ್ತನೆಗೊಂಡು ರೈಲು ಹಳಿಗಳಿಗೆ ಇಳಿದು ಪ್ರಯಾಣಿಕರನ್ನು ಅವರ ಸಮೀಪದ ರೈಲು ನಿಲ್ದಾಣಗಳಿಗೆ ತಲುಪಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News