ಥಾಯ್ ಗುಹೆಯಿಂದ ಮಕ್ಕಳು ಹೊರಬಂದ ತಕ್ಷಣ ನಡೆದಿತ್ತು ಅನಿರೀಕ್ಷಿತ ಘಟನೆ

Update: 2018-07-12 17:00 GMT

ಚಿಯಾಂಗ್ ರೈ (ಥಾಯ್ಲೆಂಡ್), ಜು. 12: ಥಾಯ್ಲೆಂಡ್‌ನ ಕಗ್ಗತ್ತಲ ಗುಹೆಯಲ್ಲಿ ಸಿಲುಕಿಕೊಂಡಿದ್ದ ‘ವೈಲ್ಡ್ ಬೋರ್ಸ್’ ತಂಡದ 12 ಬಾಲ ಆಟಗಾರರು ಮತ್ತು ಅವರ ಕೋಚನ್ನು ಹೊರಗೆ ತರುವ ಕಾರ್ಯಾಚರಣೆಯ ಕೊನೆಯ ಹಂತವು ಭಾರೀ ದುರಂತದಲ್ಲಿ ಕೊನೆಗೊಳ್ಳುವುದು ಕೂದಲೆಳೆಯ ಅಂತರದಲ್ಲಿ ತಪ್ಪಿತು ಎನ್ನುವ ಅಂಶ ಬೆಳಕಿಗೆ ಬಂದಿದೆ.

ಈ ಹಂತದಲ್ಲಿ ನೀರು ಖಾಲಿ ಮಾಡುವ ಪಂಪ್‌ಗಳು ಸ್ಥಗಿತಗೊಂಡವು ಹಾಗೂ ಅದರ ಉಸ್ತುವಾರಿ ಹೊತ್ತಿದ್ದ ಜನರ ಬೊಬ್ಬೆ ಕಮಾಂಡರ್ ಚೈಯನಂತ ಪೀರನರೊಂಗ್‌ಗೆ ಕೇಳಿತ್ತು.

ಮಂಗಳವಾರ ಸಂಜೆಯ ಹೊತ್ತಿಗೆ, ಮೂರು ದಿನಗಳ ರಕ್ಷಣಾ ಕಾರ್ಯಾಚರಣೆಯ ಕೊನೆಯಲ್ಲಿ ಎಲ್ಲ 12 ಬಾಲ ಫುಟ್ಬಾಲಿಗರು ಮತ್ತು ಅವರ 25 ವರ್ಷದ ಕೋಚ್‌ರನ್ನು ಆಗಷ್ಟೇ ಹೊರತರಲಾಗಿತ್ತು ಹಾಗೂ 60 ವರ್ಷದ ಮಾಜಿ ನೇವಿ ಸೀಲ್ ಚೈಯನಂತ ಪೀರನರೊಂಗ್ ಥಾಮ್ ಲುವಾಂಗ್ ಗುಹೆಯಿಂದ ಕೊನೆಯದಾಗಿ ಹೊರಬರಬೇಕಿತ್ತು.

ಆಗ ಗುಹೆಯ ಎರಡು ಚೇಂಬರ್‌ಗಳ ನಡುವಿನ ಪ್ರದೇಶದಲ್ಲಿದ್ದ ನೀರು ಖಾಲಿ ಮಾಡುವ ಪಂಪ್‌ಗಳು ಕೈಕೊಟ್ಟವು. ಪರಿಣಾಮವಾಗಿ ಈ ಎರಡು ಚೇಂಬರ್‌ಗಳಿಗೆ ನೀರು ನುಗ್ಗಿತು. ಆಗ 20 ರಕ್ಷಣಾ ಕಾರ್ಯಕರ್ತರು ಗುಹೆಯ ಒಳಗಿದ್ದರು.

ಈ ಸ್ಥಳದಲ್ಲಿ ನೀರು ಖಾಲಿ ಮಾಡುವ ಪಂಪ್‌ಗಳನ್ನು ಉಪಯೋಗಿಸದಿದ್ದರೆ ಆಮ್ಲಜನಕದ ಸಿಲಿಂಡರ್ ಇಲ್ಲದೆ ಹೊರಬರಲು ಸಾಧ್ಯವಿಲ್ಲ. ಒಳಗೆ ಉಳಿದಿದ್ದ ರಕ್ಷಣಾ ಕಾರ್ಯಕರ್ತರು ಮುಳುಗುವಾಗ ಧರಿಸುವ ಉಪಕರಣಗಳನ್ನು ಹೊಂದಿರಲಿಲ್ಲ.

‘‘ಕೊನೆಯ ಮುಳುಗುಗಾರ ಹೊರಗೆ ಬರುವಾಗ ಅಲ್ಲಿ ತಲೆಯ ಮಟ್ಟದವರೆಗೆ ನೀರು ಸಂಗ್ರಹವಾಗಿತ್ತು. ಆಮ್ಲಜನಕ ಸಿಲಿಂಡರ್ ಬಳಸಬೇಕಾದ ಮಟ್ಟಕ್ಕೆ ನೀರು ಏರಿತ್ತು’’ ಎಂದು ಚೈಯನಂತ ಪೀರನರೊಂಗ್ ಹೇಳಿದರು.

ಮಕ್ಕಳು ನಿದ್ರಿಸುತ್ತಿದ್ದರು

ಮಕ್ಕಳು ಗಾಬರಿಗೊಳ್ಳದಂತೆ ಲಘು ಉದ್ವೇಗಶಮನ ಮಾತ್ರೆಗಳನ್ನು ನೀಡಲಾಗಿತ್ತು ಎಂಬುದಾಗಿ ಥಾಯ್ಲೆಂಡ್‌ನ ಸೇನಾಡಳಿತಗಾರ ಪ್ರಯೂತ್ ಚಾನ್-ಒ-ಚಾ ಮಂಗಳವಾರ ಹೇಳಿದ್ದರು.

 ಆದರೆ, ಗುಹೆಯಿಂದ ಹೊರಬರುವ ಯಾನದ ವೇಳೆ ಮಕ್ಕಳೆಲ್ಲ ಮಲಗಿದ್ದರು ಎಂದು ಚೈಯನಂತ ಪೀರನರೊಂಗ್ ಹೇಳಿದರು.

‘‘ನೀರಿನಲ್ಲಿ ಹೇಗೆ ಉಸಿರಾಡುವುದು ಮತ್ತು ಸಮಾಧಾನದಿಂದ ಇರುವುದು ಎನ್ನುವುದಷ್ಟೇ ಮಕ್ಕಳಿಗೆ ತಿಳಿದರೆ ಸಾಕಿತ್ತು’’ ಎಂದರು.

ಸುತ್ತು ಬಳಸುವ ದಾರಿಯುದ್ದಕ್ಕೂ ವೈದ್ಯರು, ಮುಳುಗುಗಾರರು ಮತ್ತು ಇತರ ರಕ್ಷಣಾ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು. ಅವರು ಮಕ್ಕಳ ಆರೋಗ್ಯವನ್ನು ಪರಿಶೀಲಿಸುತ್ತಿದ್ದರು.

ನಿವೃತ್ತ ಸೀಲ್‌ನ ದುರಂತಮಯ ಸಾವು

 ಫುಟ್ಬಾಲ್ ತಂಡ ಯಶಸ್ವಿಯಾಗಿ ಗುಹೆಯಿಂದ ಹೊರಬಂದ ಸಂಭ್ರಮವನ್ನು, ಇದೇ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡ ನಿವೃತ್ತ ನೇವಿ ಸೀಲ್ ಸಮನ್ ಕುನಾನ್‌ರ ಸಾವು ಮರೆಮಾಚಿದೆ.

ಗುಹೆಯ ದಾರಿಯುದ್ದಕ್ಕೂ ಆಮ್ಲಜನಕದ ಸಿಲಿಂಡರ್‌ಗಳನ್ನು ಇಡುವ ಕಾರ್ಯದಲ್ಲಿ ತೊಡಗಿದ್ದಾಗ ಅವರು ತೊಟ್ಟಿದ್ದ ಆಮ್ಲಜನಕ ಸಿಲಿಂಡರ್ ಖಾಲಿಯಾಗಿ ಉಸಿರುಗಟ್ಟಿ ಮೃತಪಟ್ಟರು.

ಹೀರೊಗಳಾದ ಬ್ರಿಟಿಶ್ ಮುಳುಗುಗಾರರು

ಜೂನ್ 23ರಂದು ಗುಹೆಗೆ ನುಗ್ಗಿದ್ದ ‘ವೈಲ್ಡ್ ಬೋರ್ಸ್’ ಫುಟ್ಬಾಲ್ ತಂಡವನ್ನು 9 ದಿನಗಳ ಬಳಿಕ ಮೊದಲು ಪತ್ತೆಹಚ್ಚಿದ್ದು ಬ್ರಿಟಿಶ್ ಮುಳುಗು ತಜ್ಞರಾದ ರಿಚರ್ಡ್ ಸ್ಟಾಂಟನ್ ಮತ್ತು ಜಾನ್ ವೊಲಾಂಥನ್.

ಗುಹೆಯಲ್ಲಿ ಸುಮಾರು 4 ಕಿಲೋಮೀಟರ್ ಒಳಗಡೆ ದಿಬ್ಬವೊಂದರಲ್ಲಿದ್ದ ಮಕ್ಕಳು ಮತ್ತು ಅವರ ಕೋಚನ್ನು ಅವರು ಪತ್ತೆಹಚ್ಚಿದ್ದರು. ತಂಡದ ರಕ್ಷಣಾ ಕಾರ್ಯಾಚರಣೆಯಲ್ಲಿ ಇದು ಮಹತ್ವದ ಘಟ್ಟವಾಗಿತ್ತು.

ಬುಧವಾರ ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ವೊಲಾಂಥನ್‌ರನ್ನು ಬೀಳ್ಕೊಡುವಾಗ ಅಲ್ಲಿ ನೆರೆದಿದ್ದವರು ಎದ್ದುನಿಂತು ಚಪ್ಪಾಳೆ ತಟ್ಟಿದರು.

ಮಳೆ ಬಂದಾಗ ಗುಹೆಗೆ ಹೋಗಬೇಡಿ!

‘‘ನಮಗೆ ವಹಿಸಿದ ಕೆಲಸವನ್ನು ಮಾಡಲು ನಮಗೆ ಸಾಧ್ಯವಾಯಿತು’’ ಎಂದು ಬ್ರಿಟಿಶ್ ಮುಳುಗುಗಾರ ವೊಲಾಂಥನ್ ಹೇಳಿದರು.

ಥಾಯ್ಲೆಂಡ್‌ನ ಮಕ್ಕಳಿಗೆ ನಿಮ್ಮ ಸಂದೇಶವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಮಳೆ ಬರುವಾಗ ಗುಹೆಯ ಒಳಗೆ ಹೋಗಬೇಡಿ’’ ಎಂದರು. ಎಲ್ಲರೂ ಜೋರಾಗಿ ನಕ್ಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News