ಎಲ್ಪಿಜಿ ಸಬ್ಸಿಡಿ ಶೇ. 60ಕ್ಕೆ ಏರಿಕೆ
Update: 2018-07-12 23:46 IST
ಹೊಸದಿಲ್ಲಿ, ಜು. 12: ತೈಲ ಬೆಲೆ ಏರಿಕೆ ಹೊರತಾಗಿಯೂ ಅಡುಗೆ ಅನಿಲ ಸಬ್ಸಿಡಿಯಲ್ಲಿ ಏರಿಕೆ ಮಾಡುವ ಮೂಲಕ ಸರಕಾರ ಜನರ ನೆರವಿಗೆ ಧಾವಿಸಿದೆ. ಕಳೆದ ಮೇಯಲ್ಲಿ 159.29 ರೂ. ಇದ್ದ ಸಬ್ಸಿಡಿ ಜೂನ್ ತಿಂಗಳಲ್ಲಿ 204.95 ರೂ.ಗೆ ತಲುಪಿದ್ದು, ಈ ತಿಂಗಳ ಆರಂಭದಲ್ಲಿ 257.74 ರೂ.ಗೆ ತಲುಪಿದೆ. ಒಟ್ಟಾರೆಯಾಗಿ ಒಂದೂವರೆ ತಿಂಗಳ ಅವಧಿಯಲ್ಲಿ ಎಲ್ಪಿಜಿ ಸಬ್ಸಿಡಿ ದರದಲ್ಲಿ ಶೇ. 60 ಏರಿಕೆಯಾಗಿದೆ.
ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್‌ನ ದರಗಳನ್ನು ನಿಯಂತ್ರಿಸುವ ಸಲುವಾಗಿ ಈ ರೀತಿ ಸಬ್ಸಿಡಿಯಲ್ಲಿ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿನಬಳಕೆಯ ಇಂಧನ ದರವನ್ನು ನಿಗದಿಪಡಿಸುವ ಅಂತಾರಾಷ್ಟ್ರೀಯ ಎಲ್ಪಿಜಿ ದರ ಜೂನ್ ತಿಂಗಳಿಂದ ಏರು ಗತಿಯಲ್ಲಿ ಸಾಗಿದೆ. ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ದರ 14.2 ಕೆ.ಜಿ.ಗೆ ಮೇ ತಿಂಗಳಲ್ಲಿ 653.50 ರೂ. ಇದ್ದರೆ, ಜೂನ್ ವೇಳೆಗೆ 698.50 ರೂ. ಗೆ ತಲುಪಿದ್ದು, 48 ರೂ. ಏರಿಕೆ ಕಂಡಿದೆ.