ಫೈನಲ್ ಸಂಭ್ರಮದಲ್ಲಿ ಫೋಟೊಗ್ರಾಫರ್‌ನ್ನು ಬೀಳಿಸಿದ ಕ್ರೊಯೇಶಿಯ ಆಟಗಾರರು!

Update: 2018-07-12 18:25 GMT

ಮಾಸ್ಕೊ, ಜು.12: ವಿಶ್ವಕಪ್‌ನ ಎರಡನೇ ಸೆಮಿ ಫೈನಲ್‌ನ ಹೆಚ್ಚುವರಿ ಸಮಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಗೋಲು ಹೊಡೆದು ರೋಚಕ ಜಯ ಸಾಧಿಸಿದ ಕ್ರೊಯೇಶಿಯ ಮೊತ್ತ ಮೊದಲ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಐತಿಹಾಸಿಕ ಗೆಲುವಿನ ಸಂಭ್ರಮಾಚರಣೆಯಲ್ಲಿ ಮೈಮರೆತ ಕ್ರೊಯೇಶಿಯ ಆಟಗಾರರು ಮೆಕ್ಸಿಕೊದ ಎಎಫ್‌ಪಿ ಮುಖ್ಯ ಫೋಟೊಗ್ರಾಫರ್ ಒಬ್ಬರನ್ನು ಕೆಳಗೆ ಬೀಳಿಸಿದ ಘಟನೆಯೂ ನಡೆದಿದೆ.

  ಮಾರಿಯೋ ಮಾಂಡ್ಝುಕಿಕ್ ಹೆಚ್ಚುವರಿ ಸಮಯದಲ್ಲಿ ಹೊಡೆದ ಗೋಲು ನೆರವಿನಿಂದ ಕ್ರೊಯೇಶಿಯ ತಂಡ ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯವನ್ನು 2-1 ಗೋಲುಗಳಿಂದ ಗೆದ್ದುಕೊಂಡಿತ್ತು. ಗೆಲುವಿನ ಗೋಲು ಹೊಡೆದ ತಕ್ಷಣ ಮಾಸ್ಕೊದ ಲುಝ್ನಿಕಿ ಸ್ಟೇಡಿಯಂನ ಫೋಟೊಗ್ರಾಫರ್‌ಗಳಿರುವ ಸ್ಥಳದತ್ತ ಧಾವಿಸಿದ ಮಾರಿಯೊ ಸಹ ಆಟಗಾರರೊಂದಿಗೆ ಸಂಭ್ರಮಿಸಿದರು. ಗೆಲುವಿನ ಸಂಭ್ರಮದಲ್ಲಿದ್ದ ಕೊಯೇಶಿಯಾ ಆಟಗಾರರು ಫೋಟೊ ಕ್ಲಿಕ್ಕಿಸಲು ತಯಾರಾಗಿದ್ದ ಫೋಟೊಗ್ರಾಫರ್ ಯೂರಿ ಕೊರ್ಟೆಝ್‌ರನ್ನು ಕೆಳಗೆ ಬೀಳಿಸಿದರು. ಮೈದಾನದಲ್ಲಿ ಕೆಳಗೆ ಬಿದ್ದ ಫೋಟೊಗ್ರಾಫರ್ ಕೊರ್ಟೆಝ್ ಅವರು ಕ್ರೊಯೇಶಿಯಾ ಆಟಗಾರರ ಸಂಭ್ರಮದ ಅದ್ಭುತ ಫೋಟೊಗಳನ್ನು ಸೆರೆಹಿಡಿಯುವುದನ್ನು ಮಾತ್ರ ಮರೆಯಲಿಲ್ಲ. ‘‘ನಾನು ನನ್ನ ಲೆನ್ಸ್ ಬದಲಿಸುತ್ತಿದ್ದಾಗ ಕ್ರೊಯೇಶಿಯಾ ಆಟಗಾರರು ನನ್ನತ್ತ ಓಡಿ ಬಂದರು. ಎಲ್ಲ ಆಟಗಾರರು ನನ್ನ ಮೇಲೆ ಮುಗಿಬಿದ್ದರು. ಅದೊಂದು ರೋಮಾಂಚಕ ಕ್ಷಣವಾಗಿತ್ತು. ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದ ಆಟಗಾರರಿಗೆ ತಕ್ಷಣವೇ ನನ್ನನ್ನು ಕೆಳಗೆ ಬೀಳಿಸಿದ್ದು ಅರಿವಾಯಿತು. ಆಗ ಅವರು ನನ್ನನ್ನು ವಿಚಾರಿಸಿದ್ದಲ್ಲದೆ, ತಮ್ಮ ತಪ್ಪಿಗೆ ಕ್ಷಮೆಕೋರಿದರು. ಓರ್ವ ಆಟಗಾರ ನನ್ನ ಲೆನ್ಸ್‌ನ್ನು ಪಡೆದು ಮೇಲಕ್ಕೆತ್ತಿದರು. ಇನ್ನೊಬ್ಬ ಆಟಗಾರ(ಡೊಮಗೊಜ್ ವಿಡಾ)ನನ್ನ ಹಣೆಗೆ ಮುತ್ತಿಟ್ಟ’’ ಎಂದು ಮೆಕ್ಸಿಕೊ ನಗರದ ಕೊರ್ಟೆಝ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News