ಚಿಕ್ಕಮಗಳೂರಿನಲ್ಲಿ ಮುಂದುವರಿದ ಭಾರೀ ಮಳೆ: ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ

Update: 2018-07-13 13:15 GMT

ಚಿಕ್ಕಮಗಳೂರು, ಜು.13: ಜಿಲ್ಲೆಯ ಮಲೆನಾಡು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಶುಕ್ರವಾರವೂ ಮುಂದುವರಿದಿದೆ. ಕೊಪ್ಪ ತಾಲೂಕಿನ ಜಯಪುರದಲ್ಲಿ ಭಾರೀ ಮಳೆಯಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಮಣ್ಣು ಕುಸಿತ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿದಿಸಲಾಗಿದೆ.

ಜಿಲ್ಲೆಯ ಮಲೆನಾಡು ಭಾಗದ ಕೊಪ್ಪ, ಮೂಡಿಗೆರೆ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆಗೆ ಜನತೆ ರೋಸಿ ಹೋಗಿದ್ದು,  ಮಳೆಯ ಅವಾಂತರಗಳೂ ಜಿಲ್ಲೆಯಾದ್ಯಂತ ಮುಂದುವರಿದಿದೆ. ಸತತ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭಾರೀ ಮಳೆ ಹಿನ್ನೆಲೆಯಲಿ ಮಲೆನಾಡು ವ್ಯಾಪ್ತಿಯ ಎನ್.ಆರ್.ಪುರ ತಾಲೂಕು ಹೊರತು ಪಡಿಸಿ ಮೂಡಿಗೆರೆ, ಶೃಂಗೇರಿ, ಕೊಪ್ಪ ತಾಲೂಕಿನ ಶಾಲಾ-ಕಾಲೇಜುಗಳಿಗೆ ಶುಕ್ರವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು. 

ಜಿಲ್ಲೆಯ ಕೊಪ್ಪ, ಶೃಂಗೇರಿ,ಎನ್.ಆರ್.ಪುರ, ಮೂಡಿಗೆರೆ ಭಾಗದಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿರುವ ವರದಿಯಾಗಿದೆ. ಮಳೆಯಿಂದ ಬಾಳೆಹೊನ್ನೂರು ಸಮೀಪದ ತಾವರೆಕೆರೆ ದಂಡೆಯಲ್ಲಿ ಬಿರುಕು ಉಂಟಾಗಿದ್ದು, ಕೆರೆಯ ಬಿರುಕಿನಿಂದ ನೀರು ಸೋರಿಕೆಯಾಗಿ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗುತ್ತಿದೆ. ಕೆರೆ ದಂಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಕೆರೆ ದಂಡೆ ಒಡೆಯುವ ಭೀತಿ ಉಂಟಾಗಿದೆ. ಬಾಳೆಹೊನ್ನೂರಿನಲ್ಲಿ ಸುರಿದ ಬಾರಿ ಮಳೆಗೆ ಮಾರುಗುಡಿ ರಸ್ತೆಯ ಮಣಿ ಎಂಬವರಿಗೆ ಸೇರಿದ ಮನೆಯ ಹಿಂಭಾಗದ ಗೋಡೆ ಕುಸಿದು ಬಿದ್ದು, ಮನೆಗೆ ಹಾನಿ ಉಂಟಾಗಿದೆ.

ಚಿಕ್ಕಮಗಳೂರು ನಗರದ ನಗರಸಭೆ ಆವರಣದ ಕೌಂಪೌಂಡ್ ಮೇಲೆ ಬೃಹತ್ ಆಕಾರದ ಮರಬಿದ್ದು, ಕೌಂಪೌಂಡ್‍ಗೆ ಹಾನಿಯಾಗಿದೆ. ಶೃಂಗೇರಿ ತಾಲೂಕಿನಾದ್ಯಾಂತ ನಿರಂತರ ಮಳೆಯಾಗುತ್ತಿದ್ದು, ಮೂಡಿಗೆರೆ ತಾಲೂಕಿನಲ್ಲಿ ನಿರಂತರ ಮಳೆಗೆ ಹೇಮಾವತಿ ನದಿಯೂ ತುಂಬಿ ಹರಿಯುತ್ತಿದೆ.  ಚಾರ್ಮಾಡಿ ಘಾಟಿಯ ಸುತ್ತಮುತ್ತ ಮಳೆಯಾಗುತ್ತಿದ್ದು, ಮಂಜು ಮುಸುಕಿದ ವಾತಾವರಣದಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಯಲು ಸೀಮೆ ಭಾಗವಾದ ಕಡೂರು, ಬೀರೂರು ತರೀಕೆರೆ ಪಟ್ಟಣ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗುತ್ತಿದೆ.

ಕೊಪ್ಪ ತಾಲೂಕಿನ ಜಯಪುರ ಪಟ್ಟಣ ಸಮೀಪದ ಚನ್ನನಾರಾಯಣಶೆಟ್ಟರ ಮನೆಯ ಹತ್ತಿರ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ರಸ್ತೆಯ 60 ಅಡಿ ಮಣ್ಣು ಹಳ್ಳಕ್ಕೆ ಕುಸಿದಿದ್ದು, ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ. ಶುಕ್ರವಾರ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಆನಂದಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, 'ಸ್ಥಳಕ್ಕೆ ಕಾವಲುಗಾರರೊಬ್ಬರನ್ನು ನೇಮಿಸಲಾಗುವುದು, ವಾಹನಗಳು ವೇಗವಾಗಿ ಸಾಗದಂತೆ ಸೂಚನೆ ನೀಡುತ್ತಿದ್ದು, ಲಘುವಾಹನಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡಿ, ಭಾರೀ ವಾಹನ ಸಂಚಾರ ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.  ಈ ರಸ್ತೆ ಕುಸಿದರೆ, ಕೊಪ್ಪ,ಶೃಂಗೇರಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಭಾರೀ ಮಳೆಯಿಂದ 6ಕೋಟಿ ರೂ. ನಷ್ಟ ಉಂಟಾಗಿದೆ. ಈಗ ಭೇಟಿ ನೀಡಿರುವ ಸ್ಥಳ ಕುಸಿದುಹೋದರೆ ದುರಸ್ಥಿಗೆ 2 ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದೆ.

ಹಳ್ಳದಲ್ಲಿ ಕೊಚ್ಚಿ ಹೋದ ಯುವಕನಿಗಾಗಿ ಮುಂದುವರಿದ ಎನ್‍ಡಿಆರ್‍ಎಫ್ ಶೋಧ:
 
ಕೊಪ್ಪ ತಾಲೂಕಿನ ಬಸ್ತಿಹಳ್ಳದ ಸೇತುವೆಯಲ್ಲಿ ಮಂಗಳವಾರ ರಾತ್ರಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕ ಅಶೋಕ್‍ಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಯುವಕನ ಪತ್ತೆಗಾಗಿ ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸಪಡುತ್ತಿದ್ದಾರೆ. ಆದರೆ ಶುಕ್ರವಾರ ಸಂಜೆಯಾದರೂ ಯುವಕನ ಬಗ್ಗೆ ಯಾವುದೇ ಮಾಹಿತಿ ಲಬ್ಯವಾಗಿಲ್ಲ. ಭಾರೀ ಮಳೆ ಶೋಧ ಕಾರ್ಯಕ್ಕೆ ತೀವ್ರ ಅಡ್ಡಿಯುಂಟು ಮಾಡುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News