ಲಿಂಗತ್ವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಕೌಟುಂಬಿಕ ದೌರ್ಜನ್ಯ ಕಾನೂನಿನಡಿ ಬರಲಿ: ಡಾ.ಅಕ್ಕೈ ಪದ್ಮಶಾಲಿ

Update: 2018-07-13 10:43 GMT

ಮಂಗಳೂರು, ಜು.13: ಕೌಟುಂಬಿಕ ದೌರ್ಜನ್ಯ ಕಾನೂನಿನಡಿ ಲಿಂಗತ್ವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಪ್ರಕರಣಗಳನ್ನೂ ಒಳಪಡಿಸಬೇಕು. ಲೈಂಗಿಕ ದೌರ್ಜನ್ಯ ವಿರುದ್ಧದ ಕಾನೂನನ್ನು ವಿಸ್ತಾರವಾಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಡಾ. ಅಕ್ಕೈ ಪದ್ಮಶಾಲಿ ಒತ್ತಾಯಿಸಿದರು.

ನಗರದ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಇಂದು ‘ಒಂದೆಡೆ’ ಸಂಸ್ಥೆಯ ವತಿಯಿಂದ ಹೊರತರಲಾದ ‘ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ, ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ’ ಕುರಿತಾದ ವರದಿಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ಕೌಟುಂಬಿಕವಾಗಿ ಇಂದಿಗೂ ಸ್ವೀಕರಿಸದಂತಹ ಪರಿಸ್ಥಿತಿ ಇದೆ. ನಮ್ಮ ಮೇಲಿನ ದೌರ್ಜನ್ಯಗಳು ನಿಂತಿಲ್ಲ, ನಮ್ಮ ಮೇಲೆಯೂ ಅತ್ಯಾಚಾರಗಳು ನಡೆಯುತ್ತವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ನಮ್ಮ ಸಮುದಾಯವನ್ನು ಸಮಾಜ ಘನತೆ, ಗೌರವದಿಂದ ಕಾಣಬೇಕು ಎಂದು ಅಕ್ಕೈ ಪದ್ಮಶಾಲಿ ಮನವಿ ಮಾಡಿಕೊಂಡರು.

ಬಳಿಕ ವಿದ್ಯಾರ್ಥಿಗಳು ಹಾಗೂ ಸಭಿಕರ ಜತೆ ಸಂವಾದದ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ, ನನ್ನ ಲಿಂಗವನ್ನು ನಾನು ತೀರ್ಮಾನಿಸುವ ಹಕ್ಕನ್ನು ನನಗೆ ಸಂವಿಧಾನ ನೀಡಿದೆ. ಹಾಗಾಗಿ ಲಿಂಗತ್ವ ಅಲ್ಪಸಂಖ್ಯಾತರ ಮೇಲೂ ಯಾರಿಗೂ ದೌರ್ಜನ್ಯ ಎಸಗುವ ಅಧಿಕಾರ ಇಲ್ಲ ಎಂದರು.

ಲಿಂಗದ ಗುರುತಿಸುವಿಕೆಯ ಮೂಲಕ ನಮ್ಮನ್ನು ಸಮಾಜದಿಂದ ಪ್ರತ್ಯೇಕಿಸುವುದನ್ನು ನಿಲ್ಲಿಸಬೇಕು. ನಮ್ಮನ್ನು ನಾವು ಇರುವಂತೆಯೇ ಸಮಾಜ ಸ್ವೀಕರಿಸಬೇಕೆಂಬುದು ನಮ್ಮ ಕಳಕಳಿಯ ಮನವಿ ಎಂದ ಡಾ.ಅಕ್ಕೈ, ಯಾವುದೇ ಧರ್ಮಗಳು ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧವಾಗಿಲ್ಲ. ಬದಲಾಗಿ ಎಲ್ಲಾ ಧರ್ಮಗಳು ಲಿಂಗತ್ವ ಅಲ್ಪಸಂಖ್ಯಾತರಿಗೆ ಘನತೆ, ಗೌರವದ ಬದುಕನ್ನು ಪ್ರತಿಪಾದಿಸುತ್ತವೆ ಎಂದರು.

 ಐಪಿಸಿ ಸೆಕ್ಷನ್ 377 ವಿರುದ್ಧದ ಹೋರಾಟ: ಕೇಂದ್ರ ಸರಕಾರ ಮೌನಕ್ಕೆ ಅಸಮಾಧಾನ

ಐಪಿಸಿ ಸೆಕ್ಷನ್ 377 (ಸಲಿಂಗ ಕಾಮ ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆ) ವಿರುದ್ಧದ ಸರ್ವೋಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೌನ ವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಡಾ.ಅಕ್ಕೈ ಪದ್ಮಶಾಲಿ, ಐಪಿಸಿ ಸೆಕ್ಷನ್ 377 ಕುರಿತಂತೆ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ. ಅದರಿಂದ ನುಣುಚಿಕೊಳ್ಳುವುದು ಸರಿಯಲ್ಲ. ನಾವೂ ಮಾನವರು. ನಮಗೂ ಘನತೆಯಿಂದ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಹಾಗಾಗಿ ಸರ್ವೋಚ್ಚ ನ್ಯಾಯಾಲಯದಿಂದ ತಮ್ಮ ಹೋರಾಟಕ್ಕೆ ನ್ಯಾಯ ದೊರೆಯುವ ಆಶಾಭಾವ ತಮಗಿದೆ ಎಂದರು.

‘ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ, ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ’ಯನ್ನು ಬಿಡುಗಡೆಗೊಳಿಸಿದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ದ.ಕ. ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು, ಅವರಿಗೊಂದು ಘನತೆಯ ಬದುಕನ್ನು ಕಲ್ಪಿಸುವಲ್ಲಿ ಜಿಲ್ಲಾ ಮಟ್ಟದ ನೀತಿಯೊಂದನ್ನು ರೂಪಿಸುವುದಾಗಿ ಹೇಳಿದರು.

'ಒಂದೆಡೆ' ಕಾರ್ಯಕ್ರಮ ವ್ಯವಸ್ಥಾಪಕಿ ಸನಾಶ್ರೀ ಮಾತನಾಡಿ, ಇಂದು ಬಿಡುಗಡೆಗೊಂಡ ವರದಿ ಸಮುದಾಯದಲ್ಲಿ ಹಾಗೂ ಸಮಾಜದಲ್ಲಿ ಮಹತ್ತರ ಬದಲಾವಣೆಗೆ ಸಹಕಾರಿಯಾಗಲಿದೆ ಎಂದರು.

ನೈಜ ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಿ

ಪರಿವರ್ತನಾ ಟ್ರಸ್ಟ್‌ನ ಪ್ರತಿನಿಧಿ ಸಂಜನಾ ಮಾತನಾಡಿ, 10 ವರ್ಷಗಳ ಹಿಂದೆ ಮಂಗಳೂರಿಗೆ ಬದುಕನ್ನು ಅರಸಿ ಬಂದಾಗ ಸಮುದಾಯದಿಂದಲೇ ಹಿಂಸೆ ಆಗಿ, ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಪರಿವರ್ತನಾ ಟ್ರಸ್ಟ್ ನನ್ನಂತೆ ಹಲವು ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಬದುಕು ನೀಡಿದೆ. ಹೀಗಿದ್ದರೂ ಕೆಲ ನಕಲಿ ವ್ಯಕ್ತಿಗಳಿಂದಾಗಿ ನಾವು ಪೊಲೀಸ್ ದೌರ್ಜನ್ಯವನ್ನು ಎದುರಿಸುವಂತಾಗಿದೆ. ಜಿಲ್ಲಾಡಳಿತ ನೈಜ ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಿ ಅವರ ಬದುಕಿಗೆ ಭದ್ರತೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್, ಬದಲಾವಣೆ ನಮ್ಮಿಂದಲೇ ಆರಂಭವಾದಾಗ ಸಮಾಜದಲ್ಲಿ ನಾವೆಲ್ಲಾ ಒಂದಾಗಿ ಜೀವಿಸಲು ಸಾಧ್ಯ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಮಂಗಳೂರು ಸಿಟಿಝನ್ ಫೋರಂನ ಮುಖ್ಯಸ್ಥರಾದ ವಿದ್ಯಾ ದಿನಕರ್, ಪರಿವರ್ತನಾ ಟ್ರಸ್ಟ್‌ನ ಶ್ರೀನಿಧಿ ಉಪಸ್ಥಿತರಿದ್ದರು.


ಜಿಲ್ಲಾ ಮಟ್ಟದ ಸಮಿತಿ ರಚನೆಗೆ ಮುಖ್ಯಮಂತ್ರಿ ಭೇಟಿ

ಲಿಂಗತ್ವ ಅಲ್ಪಸಂಖ್ಯಾತರಿಗೆ ಶಿಕ್ಷಣ, ಉದ್ಯೋಗ, ದತ್ತು ಪಡೆಯುವಿಕೆ ಸೇರಿದಂತೆ ಸಮುದಾಯದ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ನಿಗಾ ವಹಿಸಲು ಲಿಂಗತ್ವ ಅಲ್ಪಸಂಖ್ಯಾತ ಪ್ರತಿನಿಧಿಯನ್ನು ಒಳಗೊಂಡ ಸಮಿತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಚಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ. ಜಿಲ್ಲಾ ಮಟ್ಟದಲ್ಲಿ ಈ ಸಮಿತಿಗಳನ್ನು ರಚಿಸುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಮಾಡುವುದಾಗಿ ಡಾ. ಅಕ್ಕೈ ಪದ್ಮಶಾಲಿ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News