ಒಡಿಶಾ: ಮೀನುಗಳ ಮಾದರಿಯಲ್ಲಿ ಕ್ಯಾನ್ಸರ್‌ಕಾರಕ ಫಾರ್ಮಲಿನ್ ಪತ್ತೆ

Update: 2018-07-13 14:30 GMT

ಭುವನೇಶ್ವರ, ಜು.13: ಒಡಿಶಾದ ಭುವನೇಶ್ವರದಲ್ಲಿರುವ ಮೀನು ಮಾರುಕಟ್ಟೆಯಿಂದ ಪಡೆಯಲಾದ ಮೀನುಗಳ ಮಾದರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಫಾರ್ಮಲಿನ್ ಅಂಶ ಇರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮೀನುಗಾರಿಕೆ ಮತ್ತು ಪಶು ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಹನ್ನೆರಡು ಸದಸ್ಯರ ತಂಡ ಮೀನು ಮಾರುಕಟ್ಟೆಯಲ್ಲಿ ಲಭ್ಯವಿದ್ದ ಹನ್ನೆರಡು ವಿಧಧ ಮೀನುಗಳ ಮಾದರಿಯನ್ನು ಸಂಗ್ರಹಿಸಿದ್ದಾರೆ. ಈ ಪೈಕಿ ಮಾಂಜಿ ಮೀನಿನ ಮಾದರಿಯಲ್ಲಿ ರೋಗಕಾರಕ ಫಾರ್ಮಲಿನ್ ಅಂಶ ಪತ್ತೆಯಾಗಿದ್ದು ಉಳಿದ ಮೀನುಗಳಲ್ಲೂ ಈ ರಸಾಯನಿಕ ಪತ್ತೆಯಾದಲ್ಲಿ ಮಾರುಕಟ್ಟೆಯಲ್ಲಿರುವ ಸಂಪೂರ್ಣ ಮೀನಿನ ಸಂಗ್ರಹವನ್ನೇ ನಾಶಪಡಿಸುವುದಾಗಿ ಇಲಾಖೆಯ ಕಾರ್ಯದಶಿ ವಿಶಾಲ್ ಗಗನ್ ತಿಳಿಸಿದ್ದಾರೆ. ಅಸ್ಸಾಂ ಸರಕಾರ ಈಗಾಗಲೇ ಆಂಧ್ರ ಪ್ರದೇಶದಿಂದ ಮೀನಿನ ಆಮದಿನ ಮೇಲೆ ನಿಷೇಧ ಹೇರಿದೆ. ಇದೀಗ ಒಡಿಶಾ ಸರಕಾರವೂ ಆಂಧ್ರ ಪ್ರದೇಶದಿಂದ ಆಮದಾಗುವ ಮೀನುಗಳ ಗುಣಮಟ್ಟವನ್ನು ಪರಿಶೀಲಿಸಲು ಸೂಚನೆ ನೀಡಿದೆ. ಮೀನುಗಳು ತಾಜಾ ಕಾಣುವಂತೆ ಮತ್ತು ಹೆಚ್ಚು ಸಮಯ ಹಾಳಾಗದಂತೆ ಇಡಲು ಫಾರ್ಮಲಿನ್ ರಾಸಾಯನಿಕವನ್ನು ಸಿಂಪಡಿಸಲಾಗುತ್ತದೆ. ಯಾವುದೇ ರೀತಿಯ ನಿಷೇಧಿತ ಹಾನಿಕಾರಕ ವಸ್ತುಗಳನ್ನು ಮೀನುಗಳ ಮೇಲೆ ಬಳಸದಂತೆ ನಿಗಾಯಿಡಲು ಜಿಲ್ಲಾ ಕಲೆಕ್ಟರ್ ನೇತೃತ್ವದ ಸಮಿತಿಯನ್ನು ರಚಿಸಲಾಗುವುದು ಎಂದು ಗಗನ್ ತಿಳಿಸಿದ್ದಾರೆ. ಒಂಬತ್ತರಲ್ಲಿ ಒಂದು ಮೀನಿನಲ್ಲಿ ಮಾತ್ರ ಫಾರ್ಮಲಿನ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಇತರ ಮಾರುಕಟ್ಟೆಗಳಿಂದ ಇನ್ನಷ್ಟು ಮಾದರಿಗಳನ್ನು ಸಂಗ್ರಹಿಸಲು ಯೋಚಿಸಿದ್ದೇವೆ. ನಂತರವೇ ಮೀನಿನ ಆಮದಿನ ಮೇಲೆ ನಿಷೇಧ ಹೇರುವುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News