ಪ್ರತ್ಯೇಕತಾವಾದಿಗಳ ಜೊತೆ ಮೆಹಬೂಬ ನಿಕಟತೆ ಬಯಲು: ಬಿಜೆಪಿ

Update: 2018-07-13 14:51 GMT

ಹೊಸದಿಲ್ಲಿ, ಜು.13: ಜಮ್ಮು-ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ)ಯನ್ನು ಒಡೆದರೆ ರಾಜ್ಯದಲ್ಲಿ ಮತ್ತಷ್ಟು ಭಯೋತ್ಪಾದಕರು ರೂಪುಗೊಳ್ಳುತ್ತಾರೆ ಎಂಬ ಪಿಡಿಪಿ ಅಧ್ಯಕ್ಷೆ, ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಹೇಳಿಕೆ ಪ್ರತ್ಯೇಕತಾವಾದಿಗಳ ಜೊತೆ ಅವರಿಗಿರುವ ನಿಕಟತೆಯನ್ನು ಬಯಲುಗೊಳಿಸಿದೆ ಎಂದು ಬಿಜೆಪಿ ಹೇಳಿದೆ. 

ಮೆಹಬೂಬ ಮುಫ್ತಿಯ ಹೇಳಿಕೆ ಭಯೋತ್ಪಾದಕರಿಗೆ ಆಮ್ಲಜನಕ ನೀಡುವ ಪ್ರಯತ್ನವಾಗಿದೆ . ತಿಳಿದೋ ಅಥವಾ ತಿಳಿಯದೆಯೋ, ಅಂತೂ ಪ್ರತ್ಯೇಕತಾವಾದಿಗಳ ಜೊತೆಗಿನ ನಿಕಟತೆಯನ್ನು ಅವರು ಬಯಲುಗೊಳಿಸಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ಇಲಾಖೆಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಮೆಹಬೂಬಾ ವಿಲಕ್ಷಣ ಹೇಳಿಕೆ ನೀಡಿದ್ದಾರೆ. ಅವರಿಗೆ ಬಹುಷಃ ಪಕ್ಷದ ಒಳಗಿಂದಲೇ ಭಾರೀ ಒತ್ತಡ ಎದುರಾಗಿರಬಹುದು ಎಂದು ಬಿಜೆಪಿಯ ಕೇಂದ್ರ ಸಮಿತಿ ಸದಸ್ಯ ಜಿವಿಎಲ್ ನರಸಿಂಹ ರಾವ್ ಹೇಳಿದ್ದಾರೆ.

ಅವರು ತಮ್ಮ ಪಕ್ಷವನ್ನು ಹಿಝ್ಬುಲ್ ಮುಜಾಹಿದೀನ್ ಜೊತೆ ಸಮೀಕರಿಸುತ್ತಿದ್ದಾರೆಯೇ ಎಂದವರು ಪ್ರಶ್ನಿಸಿದ್ದಾರೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಮೆಹಬೂಬ ಈಗ ಭಯೋತ್ಪಾದಕ ಚಟುವಟಿಕೆ ಅಧಿಕಗೊಳ್ಳುವ ಬಗೆ ಬೆದರಿಕೆ ಒಡ್ಡುತ್ತಿರುವುದು ತುಂಬಾ ದುರದೃಷ್ಟಕರ ವಿಷಯವಾಗಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ಮುಖಂಡ ಕವೀಂದರ್ ಗುಪ್ತಾ ಹೇಳಿದ್ದಾರೆ. ಶ್ರೀನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದ ಮೆಹಬೂಬ ಮುಫ್ತಿ, ರಾಜ್ಯದಲ್ಲಿ ಹೊಸ ಸರಕಾರ ರಚಿಸುವ ಉದ್ದೇಶದಿಂದ ಬಿಜೆಪಿ ಪಿಡಿಪಿಯನ್ನು ಒಡೆದರೆ ಆಗ ರಾಜ್ಯದಲ್ಲಿ ಇನ್ನಷ್ಟು ಸಲಾಹುದ್ದೀನ್ ಹಾಗೂ ಯಾಸಿನ್ ಮಲಿಕ್‌ನಂತಹ ಅದೆಷ್ಟೋ ಜನರು ರೂಪುಗೊಳ್ಳಬಹುದು ಎಂದು ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News