ಮುಂಬೈಯ ಅಂಬೇಡ್ಕರ್ ಸ್ಮಾರಕ 2020ರ ವೇಳೆಗೆ ಫೂರ್ಣ: ಫಡ್ನವೀಸ್

Update: 2018-07-13 14:59 GMT

ನಾಗ್ಪುರ, ಜು.13: ಮುಂಬೈಯ ಇಂದು ಮಿಲ್ಸ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಸ್ಮಾರಕವು 2020ರ ವೇಳೆಗೆ ಸಂಪೂರ್ಣಗೊಳ್ಳಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರದಂದು ವಿಧಾನ ಪರಿಷತ್‌ಗೆ ಭರವಸೆ ನೀಡಿದ್ದಾರೆ.

ಸ್ಮಾರಕ ನಿರ್ಮಾಣಕ್ಕೆ ಅಗತ್ಯವಿರುವ ಸಂಪೂರ್ಣ ಜಮೀನನ್ನು ಕೇಂದ್ರ ಸರಕಾರ ರಾಜ್ಯಕ್ಕೆ ಹಸ್ತಾಂತರಿಸಿದೆ ಮತ್ತು ಸ್ಮಾರಕ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ವಿಷಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಗಜ್ಬಿಯೆ, ಸಂಜಯ್ ದತ್ತ್, ಶರದ್ ರನ್ಪಿಸೆ, ಬಾಯಿ ಜಗ್ಪತ್, ವಿಪಕ್ಷ ನಾಯಕ ಧನಂಜಯ್ ಮುಂಡೆ ಹಾಗೂ ಇತರರು ಮಂಡಿಸಿದ ನಿಲುವಳಿಗೆ ಪ್ರತಿಕ್ರಿಯೆಯಾಗಿ ಫಡ್ನವೀಸ್ ಈ ವಿವರಣೆಯನ್ನು ನೀಡಿದ್ದಾರೆ. ಸ್ಮಾರಕ ನಿರ್ಮಾಣದಲ್ಲಿ ವಿಳಂಬವಾಗಿದೆ ಮತ್ತು ಈಗಲೂ ಅದಕ್ಕೆ ಬೇಕಾದ ಇಂದು ಮಿಲ್ಸ್‌ನ 12.5 ಎಕರೆ ಜಮೀನನ್ನು ಈಗಲೂ ಸಂಪೂರ್ಣವಾಗಿ ವರ್ಗಾಯಿಸಲಾಗಿಲ್ಲ ಎಂದು ಗಜ್ಬಿಯೆ ಆರೋಪಿಸಿದ್ದಾರೆ. ಕಟ್ಟಡದ ಯೋಜನೆಯನ್ನು ಇನ್ನೂ ಅಂಗೀಕರಿಸಲಾಗಿಲ್ಲ ಮತ್ತು ಈ ಯೋಜನೆಗೆ ಅಗತ್ಯವಿರುವ ಹಲವು ಅನುಮತಿಗಳನ್ನು ಪಡೆಯಲು ಇನ್ನೂ ಬಾಕಿಯಿದೆ ಎಂದು ಅವರು ಆರೋಪಿಸಿದ್ದಾರೆ. ರಾಷ್ಟ್ರೀಯ ಜವಳಿ ಮಂಡಳಿಗೆ ಸೇರಿದ ಜಮೀನನ್ನು 2017ರ ಮಾರ್ಚ್ 25ರಂದು ರಾಜ್ಯ ಸರಕಾರಕ್ಕೆ ವರ್ಗಾಯಿಸಲಾಗಿದೆ. ಯೋಜನೆಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಫಡ್ನವೀಸ್ ತಿಳಿಸಿದ್ದಾರೆ. ಈ ಯೋಜನೆಗೆ ಹಣದ ಕೊರತೆಯಿಲ್ಲ. ಯೋಜನೆಯು ವಿಳಂಬವೂ ಆಗಿಲ್ಲ. ಮುಂಬೈ ಯೋಜನಾ ಮಂಡಳಿ (ಎಂಎಂಆರ್‌ಡಿಎ) 150 ಕೋಟಿ ರೂ. ನೀಡಿದೆ ಮತ್ತು ಅಗತ್ಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡಲು ತನ್ನ ಬಜೆಟ್‌ನಲ್ಲಿ ಅವಕಾಶ ಮಾಡಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News