ಕಾಲೇಜು ವಿದ್ಯಾರ್ಥಿನಿಯೊಂದಿಗೆ ಪತಿಗೆ ಸಂಬಂಧ: ಬಿಜೆಪಿ ಶಾಸಕನ ಪತ್ನಿಯ ಆರೋಪ

Update: 2018-07-13 15:21 GMT

 ಜಮ್ಮು, ಜು.13: ತನ್ನ ಪತಿ ಕಾಲೇಜು ವಿದ್ಯಾರ್ಥಿನಿಯೊಂದಿಗೆ ವಿವಾಹೇತರ ಸಂಬಂಧ ಬೆಳೆಸಿದ್ದು ಆಕೆಯನ್ನು ಮದುವೆಯಾಗಿದ್ದಾರೆ ಎಂದು ಜಮ್ಮು ಕಾಶ್ಮೀರದ ಬಿಜೆಪಿ ಶಾಸಕ ಗಗನ್ ಭಗತ್ ಪತ್ನಿ ಬಹಿರಂಗವಾಗಿ ಆರೋಪಿಸಿದ್ದಾರೆ. ಈ ಮಧ್ಯೆ, ತನ್ನ ಪುತ್ರಿಯನ್ನು ಶಾಸಕ ಭಗತ್ ಅಪಹರಿಸಿರುವುದಾಗಿ ಕಾಲೇಜು ವಿದ್ಯಾರ್ಥಿನಿಯ ತಂದೆ ಆರೋಪಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯ ತಾತ ಶಾಸಕನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತು ಸಮಿತಿಯೆದುರು ಶಾಸಕ ಗಗನ್ ಹಾಜರಾಗಿ ಹೇಳಿಕೆ ನೀಡಿದ್ದಾರೆ ಎಂದು ವದರಿಯಾಗಿದೆ. 

“ಆರ್.ಎಸ್‌ಪುರ ವಿಧಾನಸಭಾ ಕ್ಷೇತ್ರದ ಶಾಸಕ ಗಗನ್ ಭಗತ್ ಮತ್ತು ನಾನು 13 ವರ್ಷದ ಹಿಂದೆ ಮದುವೆಯಾಗಿದ್ದೆವು. ಆದರೆ ಪತಿ ಈಗ ನನ್ನನ್ನು ತೊರೆದು ಪಂಜಾಬ್‌ನ ಕಾಲೇಜಿನ ವಿದ್ಯಾರ್ಥಿನಿಯೋರ್ವಳನ್ನು ವಿವಾಹವಾಗಿ ಆಕೆಯೊಂದಿಗೆ ನೆಲೆಸಿದ್ದಾರೆ” ಎಂದು ಮೋನಿಕಾ ಶರ್ಮ ಎಂಬವರು ಆರೋಪಿಸಿದ್ದರು. ಅಲ್ಲದೆ, ಮೋನಿಕಾಳ ಜೀವನ ನಿರ್ವಹಣೆಗೆ ತಿಂಗಳಿಗೆ 1 ಲಕ್ಷ ರೂ. ನೀಡುತ್ತಿರುವುದಾಗಿ ಶಾಸಕ ಗಗನ್ ಹೇಳಿಕೆಯನ್ನು ಮೋನಿಕಾ ನಿರಾಕರಿಸಿದ್ದು ಕಳೆದ ಎಪ್ರಿಲ್‌ನಲ್ಲಿ ಜೀವನ ನಿರ್ವಹಣೆಗೆ ಹಣ ನೀಡುವುದಾಗಿ ನ್ಯಾಯಾಧೀಶರೆದುರು ಸಹಿ ಹಾಕಿರುವ ಹೊರತಾಗಿ ನಯಾ ಪೈಸೆ ಕೂಡಾ ನೀಡಿಲ್ಲ ಎಂದಿದ್ದಾರೆ.

ಅಲ್ಲದೆ ಬಿಜೆಪಿ ಕೇಂದ್ರ ನಾಯಕರಿಗೆ ಹಾಗೂ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿಕೊಂಡಿರುವ ಅವರು, ನಿಮ್ಮ ಕುಟುಂಬದ ಪುತ್ರಿಯೊಬ್ಬಳು ನ್ಯಾಯ ಬೇಡುತ್ತಿದ್ದಾಳೆ. ನನ್ನ ಮತ್ತು ಮಕ್ಕಳಿಗಾಗಿ ಮಾತ್ರ ನಾನು ನ್ಯಾಯ ಕೇಳುತ್ತಿಲ್ಲ, ಈಗಷ್ಟೇ 19ರ ಹರೆಯದಲ್ಲಿರುವ ಆ ವಿದ್ಯಾರ್ಥಿನಿಗೂ ನ್ಯಾಯ ಒದಗಿಸಬೇಕು ಎಂದು ಕೋರಿದ್ದಾರೆ. ನಾನು ಮತ್ತು ಪತ್ನಿ ಡೈವೋರ್ಸ್ ಪಡೆಯಲು ಅರ್ಜಿ ಸಲ್ಲಿಸಿದ್ದೇವೆ ಎಂದು ಶಾಸಕ ತಿಳಿಸಿದ್ದು, ವಿದ್ಯಾರ್ಥಿನಿ ಹಾಗೂ ಶಾಸಕ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News