ನಾನು ಮತ್ತೆ ಮರಳಬೇಕಾದೀತು: ಬಾಪೆಗೆ ಪೀಲೆ ಟ್ವೀಟ್
ರಿಯೋ ಡಿಜನೈರೊ, ಜು.16: ಕ್ರೊಯೇಶಿಯ ವಿರುದ್ಧ್ದ ವಿಶ್ವಕಪ್ ಫೈನಲ್‌ನಲ್ಲಿ ಗೋಲು ಗಳಿಸಿದ ಫ್ರಾನ್ಸ್‌ನ ಯುವ ಆಟಗಾರ ಕೈಲಿಯಾನ್ ಬಾಪೆ ಬ್ರೆಝಿಲ್ ಲೆಜೆಂಡ್ ಪೀಲೆ ಬಳಿಕ ಈ ಸಾಧನೆ ಮಾಡಿದ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಬಾಪೆ ಚೊಚ್ಚಲ ವಿಶ್ವಕಪ್ ಟ್ರೋಫಿಗೆ ಮುತ್ತಿಡುವ ಚಿತ್ರದೊಂದಿಗೆ ‘‘ನನ್ನ ಪ್ರೀತಿಯ’’ ಎಂದು ಅಡಿ ಬರಹ ಬರೆದು ಟ್ವೀಟ್ ಪೋಸ್ಟ್ ಮಾಡಿದ್ದರು.
ಬಾಪೆ ಟ್ವಿಟರ್ ಪೋಸ್ಟ್‌ಗೆ ಉತ್ತರಿಸಿದ 70ರ ಹರೆಯದ ಪೀಲೆ,‘‘ಒಂದು ವೇಳೆ ಬಾಪೆ ಇದೇ ರೀತಿ ನನ್ನ ದಾಖಲೆಯನ್ನು ಸರಿಗಟ್ಟಿದರೆ, ನಾನು ಮತ್ತೆ ಫುಟ್ಬಾಲ್‌ಗೆ ಮರಳಬೇಕಾದೀತು’’ ಎಂದು ಟ್ವೀಟ್ ಮಾಡಿದ್ದಾರೆ. 19ರ ಹರೆಯದ ಬಾಪೆ ರವಿವಾರ 60 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ನಲ್ಲಿ ಗೋಲು ಬಾರಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. 1958ರ ವಿಶ್ವಕಪ್ ಫೈನಲ್‌ನಲ್ಲಿ ಸ್ವೀಡನ್ ವಿರುದ್ಧ ಪೀಲೆ ತನ್ನ 17ನೇ ವಯಸ್ಸಿಯಲ್ಲಿ ಗೋಲು ಬಾರಿಸಿದ್ದರು. ಈ ಮೂಲಕ ಬ್ರೆಝಿಲ್‌ಗೆ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದರು.
1958ರ ವಿಶ್ವಕಪ್ ಮೂಲಕ ಬೆಳಕಿಗೆ ಬಂದ ಪೀಲೆ ಬ್ರೆಝಿಲ್ ತಂಡ 1962 ಹಾಗೂ 1970ರಲ್ಲಿ ವಿಶ್ವಕಪ್ ಜಯಿಸಲು ನೆರವಾಗಿದ್ದರು. ಪೀಲೆ ಹ್ಯಾಟ್ರಿಕ್ ವಿಶ್ವಕಪ್ ಗೆದ್ದಂತಹ ವಿಶ್ವದ ಏಕೈಕ ಆಟಗಾರನಾಗಿದ್ದಾರೆ. ಫ್ರಾನ್ಸ್‌ನ ಬಾಪೆಗೆ ಈ ದಾಖಲೆಯನ್ನು ಸರಿಗಟ್ಟುವ ಅವಕಾಶವಿದೆ.