ಕಾವ್ಯ ಭಾಷೆಯಲ್ಲಿ ನೆರೂಡನ ಬದುಕು

Update: 2018-07-17 19:08 GMT

ನಮ್ಮ ರಸ್ತೆಗಳು ಜನರ ರಕ್ತದಿಂದ ಕೆಂಪಾಗುತ್ತಿರುವ ಈ ದಿನಗಳಲ್ಲಿ ಕವಿ ಪಾಬ್ಲೋ ನೆರೂಡ ಹೆಚ್ಚು ಪ್ರಸ್ತುತವಾಗುತ್ತಿದ್ದಾನೆ. ಕಾವ್ಯ ಅವನ ಪಾಲಿಗೆ ತನ್ನನ್ನು, ತನ್ನ ನೆಲವು ನ್ನು ಳಿಸಿಕೊಳ್ಳುವ ಒಂದು ಮಾರ್ಗವಾಗಿತ್ತು. ಬಹುಜನರಿಗಾಗಿ ಬರೆದ, ಬಾಳಿದ ಕವಿಯೆಂದೇ ಅವನ ಕವಿತೆಗಳು ಜನರ ಎದೆಯ ಹಾಡುಗಳಾಗಿ ಇಂದಿಗೂ ಜನಮನದಲ್ಲಿ ಸ್ಥಾಯಿಯಾಗಿದೆ. ಪಾಬ್ಲೋ ನೆರೂಡನ ವಿಸ್ತೃತ ಆತ್ಮಕತೆಯನ್ನು ಲಡಾಯಿ ಪ್ರಕಾಶನ ಹೊರತಂದಿದೆ. ಓ. ಎಲ್. ನಾಗಭೂಷಣ ಸ್ವಾಮಿ ಅವರು ಆ ಆತ್ಮಕತೆಯನ್ನು ಕನ್ನಡಕ್ಕೆ ಇಳಿಸಿದ್ದಾರೆ. ನೆರೂಡನ ಕವಿತೆ ಮತ್ತು ಬದುಕು ಬೇರೆ ಬೇರೆಯಲ್ಲ. ಅಂದಿನ ರಾಜಕೀಯ ಸಂದರ್ಭದ ಜೊತೆಗೆ ನಂಟನ್ನು ಹೊಂದಿರುವ ಆತನ ಕವಿತೆಗಳು ಆ ಕಾಲಘಟ್ಟದ ಮನುಷ್ಯನೊಬ್ಬನ ಪ್ರೀತಿ, ನೋವು, ಹತಾಶೆ, ಏಕಾಂಗಿತನ ಎಲ್ಲವನ್ನೂ ತೆರೆದಿಡುತ್ತದೆ. ನೆರೂಡನ ಆತ್ಮಕತೆಯೆಂದರೆ ಅಂದಿನ ಸಾಮಾಜಿಕ ಮತ್ತು ರಾಜಕೀಯ ಏಳುಬೀಳುಗಳ ಚರ್ಚೆಯಾಗಿದೆ.

ನೆರೂಡನ ಬರಹಗಳು ಹಲವು ಹೋರಾಟಗಾರರಿಗೆ ಸ್ಫೂರ್ತಿಯಾಗಿವೆ. ಕನ್ನಡಿಗರಿಗೂ ಆತ ಅಪರಿಚಿತನಲ್ಲ. ಈಗಾಗಲೇ ಅವನ ಕವಿತೆಗಳನ್ನು ಹಲವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಿಡಿ ಬರಹಗಳೂ ಬಹಳಷ್ಟು ಬಂದಿವೆ. ಜೊತೆಗೆ, ಆತನ ಪರಿಚಯಾತ್ಮಕ ಪುಟ್ಟ ಕೃತಿಗಳೂ ಕನ್ನಡದಲ್ಲಿವೆ. ಆದರೆ ಆತನ ಬೇರೆ ಬೇರೆ ಮುಖ, ಅವನ ಕಾವ್ಯದ ವಿಸ್ತಾರಗಳು, ಅದಕ್ಕೆ ಕಾರಣವಾದ ಅಂದಿನ ರಾಜಕೀಯ ಸಂದರ್ಭಗಳನ್ನು ಕನ್ನಡಿಗರು ಪೂರ್ಣವಾಗಿ ತನ್ನದಾಗಿಸಿಕೊಂಡಿಲ್ಲ. ನೆರೂಡ ಸುಮಾರು ನಲವತ್ತು ಪುಸ್ತಕಗಳನ್ನು ಬರೆದಿದ್ದಾನೆ. ನಾಲ್ಕು ಸಾವಿರ ಕವಿತೆಗಳನ್ನು ಬರೆದಿದ್ದಾನೆ. ಜಗತ್ತಿನ ಮೂವತ್ತೈದಕ್ಕೂ ಅಧಿಕ ಭಾಷೆಗಳಿಗೆ ಆತನ ಕವಿತೆಗಳು ಅನುವಾದಗೊಂಡಿವೆ. 1961ರ ಹೊತ್ತಿಗೆ ಅವನ ಪ್ರೀತಿ ಮತ್ತು ದುಃಖ ಕವಿತೆಗಳ ಸಂಕಲನ ‘ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ಒಂದು ವಿಷಾದ ಗೀತ’ ಹತ್ತು ಲಕ್ಷ ಪ್ರತಿಗಳಷ್ಟು ಮುದ್ರಣಗೊಂಡಿತ್ತು. ನೆರೂಡನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆತ ಮೂಲತಃ ಕವಿಯಾದರೂ, ಅವನು ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡವನು. ಅನೇಕ ದೇಶಗಳಲ್ಲಿ ವಿವಿಧ ರಾಯಭಾರ ಹುದ್ದೆಗಳನ್ನು ನಿರ್ವಹಿಸಿದವನು. ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಿ ಚಿಲಿಯ ರಾಜಕೀಯದಲ್ಲಿ ಪಾಲ್ಗೊಂಡು, ಸೆನೆಟಿನ ಸದಸ್ಯನೂ, ರಾಷ್ಟ್ರಾಧ್ಯಕ್ಷ ಪದವಿಯ ಚುನಾವಣೆಯ ಸ್ಪರ್ಧಿಯೂ ಆಗಿದ್ದವನು. ಆಳುವ ಸರಕಾರದ ಕೋಪಕ್ಕೆ ಗುರಿಯಾಗಿ ದೇಶ ಭ್ರಷ್ಟನಾಗಿ ಅಲೆದವನು. ಬದುಕನ್ನು ಬೇರೆ ಬೇರೆ ಹವ್ಯಾಸಗಳಿಂದ ಸಮೃದ್ಧಗೊಳಿಸಿದವನು. ಈ ಎಲ್ಲ ಕಾರಣದಿಂದ ಸಮಗ್ರ ನೆರೂಡನನ್ನು ಕನ್ನಡದಲ್ಲಿ ಕಟ್ಟಿಕೊಡುವುದು ಅಷ್ಟು ಸುಲಭವಿಲ್ಲ. ಈ ಹಿನ್ನೆಲೆಯಲ್ಲಿ ಪಾಬ್ಲೋ ನೆರೂಡ ನೆನಪುಗಳು ಆತ್ಮ ಕಥನ ಕನ್ನಡ ಸಾಹಿತ್ಯದ ಪಾಲಿಗೆ ಒಂದು ಮಹತ್ವದ ಅನುವಾದವಾಗಿದೆ. ನಾಗಭೂಷಣ ಸ್ವಾಮಿ ಅವರ ಅನುವಾದವೂ ನೆರೂಡನನ್ನು ಕನ್ನಡತನದಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 338. ಮುಖಬೆಲೆ 330 ರೂ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News