ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯ ಸೂಚನೆ ನೀಡಿದ ಧೋನಿ?

Update: 2018-07-18 14:09 GMT

ಲೀಡ್ಸ್, ಜು.18: ಭಾರತ ತಂಡ ಹೆಡ್ಡಿಂಗ್ಲೆಯಲ್ಲಿ 8 ವಿಕೆಟ್‌ಗಳಿಂದ ಸೋಲುವ ಮೂಲಕ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಪಂದ್ಯದ ಕೊನೆಯಲ್ಲಿ ಪೆವಿಲಿಯನ್‌ಗೆ ವಾಪಸಾಗುವ ವೇಳೆ ಮಾಜಿ ನಾಯಕ ಎಂಎಸ್ ಧೋನಿ ಅಂಪೈರ್‌ರಿಂದ ಚೆಂಡನ್ನು ಕೇಳಿ ಪಡೆದಿರುವುದು ಚರ್ಚಾಸ್ಪದ ವಿಷಯವಾಗಿದೆ.

ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧೋನಿಯ ಈ ವರ್ತನೆಯು ಹಲವು ಊಹಾಪೋಹಕ್ಕೆ ಕಾರಣವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಹಿರಿಯ ಆಟಗಾರ ಶೀಘ್ರವೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸೂಚನೆ ಇದಾಗಿದೆ ಎಂದು ನಂಬಿದ್ದಾರೆ.

ಉಭಯ ತಂಡಗಳು ಪಂದ್ಯ ಕೊನೆಗೊಂಡ ಬಳಿಕ ಡ್ರೆಸ್ಸಿಂಗ್ ರೂಮ್‌ನತ್ತ ಹೆಜ್ಜೆ ಇಡುತ್ತಿದ್ದಾಗ ಧೋನಿ ಅಂಪೈರ್‌ರಿಂದ ಚೆಂಡನ್ನು ಕೇಳಿ ಪಡೆದರು. ಅವರ ಈ ವರ್ತನೆಯು ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ನಿವೃತ್ತಿಯ ಅನುಮಾನವನ್ನು ಹುಟ್ಟುಹಾಕಿದೆ. 2014ರ ಆಗಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡಿದ್ದ ಸಂದರ್ಭದಲ್ಲಿ ಆ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದ್ದರೂ ಪಂದ್ಯದ ಸ್ಟಂಪ್‌ನ್ನು ಧೋನಿ ಹಿಡಿದುಕೊಂಡು ಪೆವಿಲಿಯನ್‌ಗೆ•ತೆರಳಿದ್ದರು. ಸಾಮಾನ್ಯವಾಗಿ ಆಟಗಾರರು ಸ್ಮರಣೀಯ ಸಂದರ್ಭ ಹಾಗೂ ಪಂದ್ಯ ಗೆದ್ದ ವೇಳೆ ಸ್ಟಂಪ್‌ನ್ನು ತೆಗೆದುಕೊಳ್ಳುತ್ತಾರೆ.

ಧೋನಿ ಅವರು ಅಂಪೈರ್‌ರಿಂದ ಚೆಂಡನ್ನು ಪಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಧಾನಗತಿಯ ಇನಿಂಗ್ಸ್ ಹಾಗೂ ಈ ಹಿಂದಿನ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಕಂಡುಬಾರದ ಕಾರಣ ಧೋನಿ ಇಂಗ್ಲೆಂಡ್ ಪ್ರವಾಸದ ವೇಳೆ ನಿರಂತರ ಟೀಕೆಗೆ ಗುರಿಯಾಗಿದ್ದರು.

 ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ 37 ರನ್ ಗಳಿಸಿದ್ದ ಧೋನಿ ಅಭಿಮಾನಿಗಳ ಅಪಹಾಸ್ಯಕ್ಕೆ ಈಡಾಗಿದ್ದರು. ಆಗ ನಾಯಕ ವಿರಾಟ್ ಕೊಹ್ಲಿ ಹಾಗೂ ಸಹಾಯಕ ಕೋಚ್ ಸಂಜಯ್ ಬಂಗಾರ್ ಅವರು ಧೋನಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಸರಣಿ ನಿರ್ಣಾಯಕ 3ನೇ ಪಂದ್ಯದಲ್ಲಿ ಧೋನಿ 42 ರನ್ ಗಳಿಸಿದ್ದಾರೆ. ಆದರೆ, ಅವರು ಸ್ಪಿನ್ನರ್‌ಗಳ ಎದುರು ಹೆಚ್ಚು ಡಾಟ್‌ಬಾಲ್‌ಗಳನ್ನು ಆಡಿದ್ದರು. ಧೋನಿ 3ನೇ ಪಂದ್ಯದಲ್ಲಿ 66 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 42 ರನ್ ಗಳಿಸಿದ್ದರು. ಡೇವಿಡ್ ವಿಲ್ಲಿ ಬೌಲಿಂಗ್‌ನಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಭಾರತ 8 ವಿಕೆಟ್‌ಗೆ 258 ರನ್ ಗಳಿಸಿತ್ತು. ತನ್ನ ತಂಡ 25 ರಿಂದ 30 ರನ್ ಕೊರತೆ ಎದುರಿಸಿತ್ತು ಎಂದು ಕೊಹ್ಲಿ•ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News