ಶಿರೂರು ಸ್ವಾಮೀಜಿಗೆ ವಿಷ ಪ್ರಾಶನದ ಶಂಕೆ: ಕೆಎಂಸಿ ವೈದ್ಯಕೀಯ ಅಧೀಕ್ಷಕ

Update: 2018-07-19 14:28 GMT

ಮಣಿಪಾಲ, ಜು.19: ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ದೇಹದೊಳಗಿನ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯಕೀಯ ವರದಿ ಪ್ರಕಾರ ಅವರ ಸಾವಿಗೆ ವಿಷ ಪ್ರಾಷನವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮುಂದಿನ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಮಾಹಿತಿ ಯನ್ನು ನೀಡಲಾಗಿದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಕ್ತ ಪರೀಕ್ಷೆಯಿಂದ ರಕ್ತದಲ್ಲಿ ವಿಷ ಇರುವುದು ಕಂಡು ಬಂದಿದೆ. ಅದು ಯಾವ ರೀತಿ ದೇಹದೊಳಗೆ ಹೋಗಿದೆ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವರದಿ ಪೂರ್ಣಗೊಂಡ ಬಳಿಕ ನೀಡಲಾಗುವುದು ಎಂದು ಅವರು ತಿಳಿಸಿದರು.

ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಾ.18ರಂದು ಬೆಳಗಿನ ಜಾವ 1:05ರ ಸುಮಾರಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಕರೆದುಕೊಂಡು ಬರಲಾಗಿತ್ತು. ಆಗ ಅವರ ಸ್ಥಿತಿ ಬಹಳ ಗಂಭೀರವಾಗಿತ್ತು. ಶ್ವಾಸ ತೆಗೆಯಲು ತೊಂದರೆ ಆಗುತ್ತಿತ್ತು ಮತ್ತು ರಕ್ತದೊತ್ತಡ ಕಡಿಮೆ ಆಗಿತ್ತು. ಅವರನ್ನು ಪರೀಕ್ಷಿಸಿದಾಗ ಅವರ ದೇಹದೊಳಗೆ ರಕ್ತಸ್ರಾವ ಆಗಿರುವುದು ಕಂಡು ಬಂತು ಎಂದರು.

ಗಂಭೀರ ಸ್ಥಿತಿಯಲ್ಲಿದ್ದ ಸ್ವಾಮೀಜಿಗೆ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ. ಶಿವಶಂಕರ್ ಭಟ್, ಡಾ.ಚಿದಾನಂದ ಶೆಟ್ಟಿ, ಡಾ.ಶಂಕರ್ ಪ್ರಸಾದ್ ಅವರ ತಂಡ ಚಿಕಿತ್ಸೆ ನೀಡಲು ಆರಂಭಿಸಿತು. ಅವರಿಗೆ ರಕ್ತ ನೀಡಲಾಯಿತು ಮತ್ತು ಡಯಾಲಿಸಿಸ್ ಮಾಡಲಾಯಿತು. ಆದರೂ ಅವರ ಸ್ಥಿತಿ ಸುಧಾರಿಸಲಿಲ್ಲ. ಗಂಭೀರ ಸ್ಥಿತಿಗೆ ಹೋದ ಅವರ ದೇಹದ ಎಲ್ಲ ಅಂಗಾಂಗಗಳು ವೈಫಲ್ಯ ಕಂಡವು. ತೀವ್ರ ರಕ್ತಸ್ರಾವದಿಂದ ಅವರು ಇಂದು ಬೆಳಗ್ಗೆ 8:30ರ ಕೊನೆಯುಸಿರೆಳೆದರು ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News