ಬಹುಮುಖ ಪ್ರತಿಭೆಯ ಶಿರೂರು ಸ್ವಾಮೀಜಿ

Update: 2018-07-19 08:14 GMT

ಉಡುಪಿ, ಜು.19: ವಿಪರೀತ ರಕ್ತಸ್ರಾವ ಹಾಗೂ ಬಹು ಅಂಗಗಳ ವೈಫಲ್ಯದಿಂದ ಇಂದು ಬೆಳಗ್ಗೆ ಹಠಾತ್ತನೆ ನಿಧನರಾದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥರು ಕೇವಲ ಆಧ್ಯಾತ್ಮಿಕ, ಪಾರಮಾರ್ಥಿಕ ಬದುಕಿಗೆ ಸೀಮಿತರಾಗದೇ, ಲೌಕಿಕ ಜಗತ್ತಿನ ಹಲವು ವಿಷಯಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಬಹುಮುಖ ಪ್ರತಿಭೆಯ ಸ್ವಾಮೀಜಿಯಾಗಿದ್ದರು.

55ರ ಹರೆಯದ ಶಿರೂರುಶ್ರೀ ತಮ್ಮ ಎಂಟನೇ ವರ್ಷ ಪ್ರಾಯದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ಮೂಲತಃ ಹೆಬ್ರಿ ಸಮೀಪದ ಮಡಾಮಕ್ಕಿಯ ವಿಠಲಾಚಾರ್ಯ ಹಾಗೂ ಕುಸುಮ ದಂಪತಿಯ ಪುತ್ರರಾದ ಇವರ ಪೂರ್ವಾಶ್ರಮದ ಹೆಸರು ಹರೀಶ್ ಆಚಾರ್ಯ ಎಂದಾಗಿತ್ತು.

1978ರಲ್ಲಿ ಮೊದಲ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠವನ್ನೇರಿದ್ದ ಇವರು, 2010-12ರಲ್ಲಿ ಮೂರನೇ ಬಾರಿಗೆ ಪರ್ಯಾಯವನ್ನು ಯಶಸ್ವಿಯಾಗಿ ನಡೆಸಿದ್ದರು. ನಾಲ್ಕು ದಶಕಗಳಿಗೂ ಅಧಿಕ ಕಾಲ ಶ್ರೀಕೃಷ್ಣನ ಸೇವೆ ಮಾಡಿರುವ ಇವರು ಪ್ರತಿದಿನ ಹೊಸ ಹೊಸ ಅಲಂಕಾರಗಳ ಮೂಲಕ ಕೃಷ್ಣನನ್ನು ಪೂಜಿಸಿ ಜನಪ್ರಿಯರಾಗಿದ್ದರು.

ಕಲಾರಾಧಕರಾಗಿದ್ದ ಇವರು ಡ್ರಮ್ ಸೇರಿದಂತೆ ವಿವಿಧ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದರು. ಶಿವಮಣಿ ಹಾಗೂ ಇವರ ಜೋಡಿ ಈ ದಿಶೆಯಲ್ಲಿ ಬಹು ಜನಪ್ರಿಯತೆ ಪಡೆದಿತ್ತು. ಅಲ್ಲದೇ ಇವರು ಈಜು ಹಾಗೂ ಕರಾಟೆ ಪ್ರಿಯರಾಗಿದ್ದರು.

ಎರಡು ತಿಂಗಳ ಹಿಂದೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಂದಿಸುವ ಇಂಗಿತ ವ್ಯಕ್ತಪಡಿಸುವ ಮೂಲಕ ಅಷ್ಟಮಠಗಳಲ್ಲಿ ಸಂಚಲನ ಮೂಡಿಸಿದ್ದ ಇವರು ಬಳಿಕ ನಾಮಪತ್ರವನ್ನು ಹಿಂದೆಗೆದುಕೊಂಡಿದ್ದರು. ಮೋದಿ ಹಾಗೂ ಅಮಿತ್ ಶಾರ ಅಭಿಮಾನಿ ಎಂದು ಹೇಳಿಕೊಳ್ಳುತಿದ್ದ ಇವರು ತನ್ನ ಮಠದ ಪಟ್ಟದ ದೇವರ ಮರು ಸ್ವಾಧೀನದ ವಿಚಾರದಲ್ಲಿ ಅಷ್ಟಮಠಗಳ ಉಳಿದ ಸ್ವಾಮೀಜಿಗಳೊಂದಿಗೆ ಜಿದ್ದಾಜಿದ್ದಿಗಿಳಿದು ನ್ಯಾಯಾಲಯದ ಮೆಟ್ಟಿಲು ಏರುವ ಬೆದರಿಕೆಯನ್ನೂ ಹಾಕಿದ್ದರು.

ಶಿರೂರುಶ್ರೀ ಮೃತದೇಹವಿರುವ ಕೆಎಂಸಿ ಆಸ್ಪತ್ರೆಯ ಶವಾಗಾರ ಹಾಗೂ ಉಡುಪಿ ರಥಬೀದಿಯಲ್ಲಿರುವ ಶಿರೂರು ಮಠದ ಎದುರು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕೃಷ್ಣ ಮಠಕ್ಕೆ ತಂದು ಬಳಿಕ ಅದನ್ನು ಹಿರಿಯಡ್ಕ ಸಮೀಪದ ಶಿರೂರಿನಲ್ಲಿರುವ ಮೂಲಮಠಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News