ಮನಪಾ: ಎಡಿಬಿ 2ನೆ ಹಂತದ ‘ಜಲಸಿರಿ’ ಯೋಜನೆ

Update: 2018-07-19 15:25 GMT

ಮಂಗಳೂರು, ಜು.19: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ ಎಡಿಬಿ ನೆರವಿನ 2ನೆ ಹಂತದ ಜಲಸಿರಿ ಯೋಜನೆಯಡಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯ ಕಾಮಗಾರಿಗೆ ಸಂಬಂಧಿಸಿ ತಿದ್ದುಪಡಿಯೊಂದಿಗೆ ಒಟ್ಟು 390 ಕೋಟಿ ರೂ.ಗಳ ಯೋಜನೆಗೆ ವಿಶೇಷ ಸಭೆಯಲ್ಲಿ ಇಂದು ಅನುಮೋದನೆ ನೀಡಲಾಯಿತು.

ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿದ್ದ ಮೇಯರ್ ಭಾಸ್ಕರ ಕೆ., ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆಯ ಬಳಿಕ ಒಟ್ಟು 390 ಕೋಟಿ ರೂ.ಗಳ ಸಮಗ್ರ ಕುಡಿಯುವ ನೀರಿನ ಯೋಜನೆಗೆ 218.5 ಕೋಟಿ ರೂ.ಗಳನ್ನು ಮನಪಾದಿಂದ ಭರಿಸಲಾಗುತ್ತಿದ್ದು, ಉಳಿದ ಹಣವನ್ನು ರಾಜ್ಯ ಸರಕಾರದಿಂದ ಒದಗಿಸುವ ಪ್ರಸ್ತಾಪಕ್ಕೆ ಮಂಜೂರಾತಿ ನೀಡಿದರು.

ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾದ ಆಕ್ಷೇಪ, ಸಲಹೆ ಸೂಚನೆಗಳನ್ನು ಕ್ರೋಢೀಕರಿಸಿಕೊಂಡು ತಿದ್ದುಪಡಿಯೊಂದಿಗೆ ಸರಕಾರದ ಮಂಜೂರಾತಿಗೆ ಕಳುಹಿಸುವುದಾಗಿ ಮೇಯರ್ ಹೇಳಿದರು.

ಕೆಯುಐಡಿಎಫ್‌ಸಿ ವತಿಯಿಂದ ಎಡಿಬಿ ನೆರವಿನ ಕ್ವಿಮಿಪ್ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ವಿತರಣಾ ಜಾಲವನ್ನು ಬಲಪಡಿಸಿ ಸಮಗ್ರ ನೀರಿನ ವ್ಯವಸ್ಥೆ ಹಾಗೂ ಕಾಮಗಾರಿ ಅನುಷ್ಠಾನಗೊಂಡ ಬಳಿಕ 8 ವರ್ಷಗಳ ಅವಧಿಗೆ ಕಾರ್ಯಚರಣೆ ಮತ್ತು ನಿರ್ವಹಣೆಗೆ 381.52 ಕೋಟಿ ರೂ.ಗಳ ಪ್ರಸ್ತಾವನೆಯನ್ನೂ ಸಭೆಯಲ್ಲಿ ಮಂಡಿಸಲಾಯಿತು.

ಯೋಜನೆಯಡಿ ನಗರದ ವಿವಿಧ ಬಡಾವಣೆಗಳಲ್ಲಿ ಹಾಲಿ ಇರುವ ಜಲಸಂಗ್ರಹಾಗಾರದ ಜತೆಗೆ 20 ಸಂಖ್ಯೆಯ ಹೆಚ್ಚುವರಿ ವಿವಿಧ ಸಾಮರ್ಥ್ಯಗಳ ಜಲ ಸಂಗ್ರಹಾಗಾರ, 8 ಸಂಖ್ಯೆಯ ಹೆಚ್ಚುವರಿ ಬೂಷ್ಟಿಂಗ್ ಪಂಪ್ ಹೌಸ್‌ಗಳು, ಹಾಲಿ ಇರುವ ಪಣಂಬೂರು ಹಾಗೂ ಬೆಂದೂರ್‌ನಲ್ಲಿರುವ ಫಿಲ್ಟ್ರೇಶನ್ ಯುನಿಗಳ ಬದಲು ರಾಮಲ್‌ಕಟ್ಟೆಯಲ್ಲಿ 18 ಎಂಜಿಡಿ ಸಾಮರ್ಥ್ಯದ ಶುದ್ಧೀಕರಣಗಾರದ ಬಳಿ ಹೊಸದಾದ ಫಿಲ್ಟ್ರೇಶನ್ ಘಟಕ ನಿರ್ಮಾಣ, ನಗರದಲ್ಲಿ ಹೊಸತಾಗಿ ನಿರ್ಮಿಸಲು ಉದ್ದೇಶಿಸಿರುವ 20 ಜಲ ಸಂಗ್ರಹಾಗಾರಕ್ಕೆ ಹಾಗೂ ಹಾಲಿ ಇರುವ ಕೆಲವು ಶುದ್ಧ ಕೊಳವೆ ಮಾರ್ಗದ ಸಾಮರ್ಥ್ಯ ಕುಂಠಿತಗೊಂಡಿರುವುದರಿಂದ ಕೊಳವೆ ಮಾರ್ಗವನ್ನು ಅಳವಡಿಸುವುದು ಹಾಗೂ ಕುಡ್ಸೆಂಪ್ ಯೋಜನೆಯಡಿ ಅಳವಡಿಸಿರುವ ವಿತರಣಾ ಜಾಲದ ಜೊತೆಗೆ ಹೆಚ್ಚುವರಿಯಾಗಿ 1026 ಕಿ.ಮೀ. ಉದ್ದದ ಎಚ್‌ಡಿಪಿಇ ವಿತರಣಾ ಜಾಲವನ್ನು ಅಳವಡಿಸುವುದು ಹಾಗೂ ಅಗೆತ ಮಾಡಿದ ರಸ್ತೆಗಳನ್ನು ಕಾಂಕ್ರೀಟ್, ಡಾಮರು ಹಾಕಿ ಯಥಾಸ್ಥಿತಿಗೆ ತರುವುದು, ಪ್ರತಿ ಮನೆ ಸಂಪರ್ಕಕ್ಕೆ ಹೊಸತಾದ ಕ್ಲಾಸ್ ಬಿ ಮಲ್ಟಿಜೆಟ್ ನೀರಿನ ಮೀಟರ್ ಅಳವಡಿಸುವುದು.ತುಂಬೆಯ ನೀರು ಶುದ್ಧೀಕರಣ ಘಟಕದಿಂದ ಎಲ್ಲಾ ಜಲಸಂಗ್ರಹಾಗಾರದವರೆಗೆ ಗಣಕೀಕರಣಗೊಳಿಸಿ ಎಸ್‌ಸಿಎಡಿಎ ತಂತ್ರಜ್ಞಾನ ಅಳವಡಿಸುವುದು ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿ ಜುಪ್ರಕಾಶ್ ಸಭೆಗೆ ಮಾಹಿತಿ ನೀಡಿದರು.

ಯೋಜನೆ ಕುರಿತಂತೆ ಆರಂಭದಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ಸದಸ್ಯ ರಾಜೇಶ್, ಎಡಿಬಿ ಪ್ರಥಮ ಹಂತದಲ್ಲಿ ಬಂದ ಮೊತ್ತದಲ್ಲಿ ಯಾವ ರೀತಿಯಲ್ಲಿ ಕಾಮಗಾರಿ ನಡೆಸಲಾಗಿದೆ ಹಾಗೂ ಇದೀಗ ದ್ವಿತೀಯ ಹಂತದ ಮೊದಲಿನ ಪ್ರಸ್ತಾವನೆಯಲ್ಲಿ ಬದಲಾವಣೆ ಮಾಡಲು ಕಾರಣವೇನು? ಕುಡಿಯುವ ನೀರಿನ ಜತೆಗೆ ಇಲ್ಲಿ ಒಳಚರಂಡಿಯ ಹಲವಾರು ಸಮಸ್ಯೆಗಳಿದ್ದರೂ ಅದನ್ನು ಪ್ರಸ್ತಾಪಿಸಲಾಗಿಲ್ಲ ಎಂದು ಆಕ್ಷೇಪಿಸಿಸಿದರು.

ಈ ಸಂದರ್ಭ ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, ಎಡಿಬಿ 2ನೆ ಹಂತದ ಯೋಜನೆಯಡಿ ಆರಂಭದಲ್ಲಿ ಒಳಚರಂಡಿಗೆ 195 ಕೋಟಿ ರೂ., ಕುಡಿಯುವ ನೀರಿಗೆ 218 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಕುಡಿಯುವ ನೀರಿನ ಯೋಜನೆಯನ್ನು ಒಟ್ಟಾರೆಯಾಗಿ ಸರಿಪಡಿಸಲು 390 ಕೋಟಿ ರೂ.ಗಳ ಅಗತ್ಯವಿರುವುದಾಗಿ ಅಂದಾಜಿಸಿ ಡಿಪಿಆರ್ ಸಿದ್ಧಪಡಿಸಲಾಗಿದೆ. 171 ಕೋಟಿ ರೂ. ಹೆಚ್ಚುವರಿಯಾಗುವ ಅನುದಾನವನ್ನು ರಾಜ್ಯದ ಉಳಿದ ನಗರಗಳಿಂದ ಉಳಿಕೆಯಾಗುವ ಹಣದಿಂದ ಭರಿಸಲಾಗುವುದು ಇಲ್ಲವೇ ಸರಕಾರದಿಂದ ಭರಿಸುವುದು ಕೆಯುಐಡಿಎಫ್‌ಸಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.

ಪ್ರಥಮ ಹಂತದಲ್ಲಿ ಒಳಚರಂಡಿ ವ್ಯವಸ್ಥೆ ಈಗಾಗಲೇ ಅಪೂರ್ಣವಾಗಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಉತ್ತಮ ಎಂದು ಸದಸ್ಯ ರಾಜೇಶ್ ಮರು ಆಗ್ರಹಿಸಿದರು.
ಮೇಯರ್ ಭಾಸ್ಕರ ಕೆ. ಮಾತನಾಡಿ, ನಗರದಲ್ಲಿ ನೀರಿನ ಸಮಸ್ಯೆಯೂ ಇದೆ. ಹಾಗಾಗಿ ಮುಂದಿನ 30 ವರ್ಷಗಳನ್ನು ಗುರಿಯಾಗಿಸಿ ಈ ಯೋಜನೆ ತಯಾರಿಸಲಾಗಿದೆ. ಒಳಚರಂಡಿ ವ್ಯವಸ್ಥೆಗೆ 1000 ಕೋಟಿ ರೂ.ಗಳ ಅಗತ್ಯವಿದೆ. ಮುಂದಕ್ಕೆ ಅದನ್ನು ಕೆಗೆತ್ತಿಕೊಳ್ಳಲಾಗುವುದು ಎಂದರು.

ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿ, 390 ಕೋಟಿ ರೂ.ಗಳಲ್ಲಿ ತುಂಬೆಯಿಂದ ಮಂಗಳೂರಿಗೆ ನೀರು ಪೂರೈಕೆಗೆ ಹೊಸ ಲೈನ್ ಅಳವಡಿಸಲಾಗುತ್ತದೆಯೇ? ಹಳೆಯ ಲೈನ್‌ನಲ್ಲಿಯೇ ನೀರು ಸರಬರಾಜು ಮಾಡುವುದಾರೆ ಇಷ್ಟೊಂದು ದುಡ್ಡು ಖರ್ಚು ಮಾಡುವುರಲ್ಲಿ ಏನರ್ಥ ಎಂದು ಪ್ರಶ್ನಿಸಿದರು.

ಅಧಿಕಾರಿ ಜಯಪ್ರಕಾಶ್ ಪ್ರತಿಕ್ರಿಯಿಸಿ, ಉಳ್ಳಾಲ, ಮುಲ್ಕಿ ಹಾಗೂ ಮನಪಾ ಸುತ್ತಮುತ್ತಲಿನ ಪ್ರದೇಶಗಳನ್ನು ಸೇರಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ತುಂಬೆಯಿಂದ 160 ಎಂಎಲ್‌ಡಿ ನೀರನ್ನು ಮನಪಾ ವ್ಯಾಪ್ತಿಯಲ್ಲಿ ಪೂರೈಕೆ ಮಾಡಲಾಗುತ್ತಿದೆ. 2031ರ ವೇಳೆಗೆ ಬೇಡಿಕೆ 180 ಎಂಎಲ್‌ಡಿಗೆ ಏರಿಕೆಯಾಗಲಿದೆ. 2040ಕ್ಕೆ ಅದು 236 ಎಂಎಲ್‌ಡಿ ಆಗುವ ನಿರೀಕ್ಷೆ ಇದೆ. ಇದಕ್ಕಾಗಿ ತುಂಬೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳ ಅಗತ್ಯವಿದೆ ಎಂದು ಹೇಳಿದರು.

ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಮಾತನಾಡಿ, 390 ಕೋಟಿ ರೂ.ಗಳನ್ನು ಯಾವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. 24*7 ಕುಡಿಯುವ ನೀರಿನ ಬಗ್ಗೆ ಈ ಹಿಂದೆಯೂ ಸಾಕಷ್ಟು ಚರ್ಚೆ ನಡೆದಿದೆಯಾದರೂ ಕ್ರಮ ಆಗಿಲ್ಲ ಎಂದು ಆಕ್ಷೇಪಿಸಿದರು.

ಸದಸ್ಯರಾದ ರೂಪಾ ಡಿ. ಬಂಗೇರ ಮಾತನಾಡಿ, ಮನಪಾ ಈಗಾಗಲೇ 310 ಕೋಟಿ ರೂ.ಗಳ ಸಾಲವನ್ನು ಹೊಂದಿದೆ. ಮತ್ತೆ ಸಾಲದ ಹೊರೆಯನ್ನು ಹೇಗೆ ತೀರಿಸುವುದು ಎಂದು ಪ್ರಶ್ನಿಸಿದರು. ಇದು ಸಾಲವಲ್ಲ. ನೆರವಿನ ಯೋಜನೆ ಎಂದು ಮೇಯರ್ ಭಾಸ್ಕರ ಮೊಯ್ಲಿ ಹೇಳಿದರು.

ಸಭೆಯಲ್ಲಿ ಯೋಜನೆ ಕುರಿತಂತೆ ಚರ್ಚೆಯ ಬಳಿಕ ಸದಸ್ಯರ ಆಕ್ಷೇಪದ ಹಿನ್ನೆಲೆಯಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಂಡು ಯೋಜನೆಗೆ ಅನುಮೋದನೆ ನೀಡಲು ನಿರ್ಣಯಿಸಲಾಯಿತು.

ಸಭೆಯಲ್ಲಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜಾ, ರಾಧಾಕೃಷ್ಣ, ಲತಾ ಸಾಲ್ಯಾನ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News