ಗುಂಪಿನಿಂದ ಥಳಿಸಿ ಹತ್ಯೆಗಳ ಕುರಿತು ಪ್ರತ್ಯೇಕ ಕಾನೂನು ಅಗತ್ಯವಿಲ್ಲ ಎಂದ ಬಿಜೆಪಿ

Update: 2018-07-19 16:14 GMT

ಹೊಸದಿಲ್ಲಿ,ಜು.19: ತಥಾಕಥಿತ ಜಾಗೃತ ಗುಂಪುಗಳಿಂದ ಹತ್ಯೆಗಳು ಮತ್ತು ಹಿಂಸೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕಟುಶಬ್ದಗಳಲ್ಲಿ ಹೇಳಿರುವ ಸರ್ವೋಚ್ಚ ನ್ಯಾಯಾಲಯವು ಇಂತಹ ಹತ್ಯೆಗಳ ವಿರುದ್ಧ ಪ್ರತ್ಯೇಕ ಕಾನೂನನ್ನು ತರುವಂತೆ ಸಂಸತ್ತಿಗೆ ಆಗ್ರಹಿಸಿದೆಯಾದರೂ,ಇದು ಅಗತ್ಯವಿಲ್ಲವೆಂದು ಆಡಳಿತ ಬಿಜೆಪಿ ಭಾವಿಸಿರುವಂತಿದೆ.

ಈಗಾಗಲೇ ಕಾನೂನೊಂದಿದೆ ಮತ್ತು ಪ್ರತ್ಯೇಕ ಕಾನೂನನ್ನು ತರುವ ಅಗತ್ಯವಿಲ್ಲ ಎಂದು ಉನ್ನತ ಬಿಜೆಪಿ ಮೂಲಗಳು ತಿಳಿಸಿದವು.

ಸಂಸತ್ತಿನ ಮುಂಗಾರು ಅಧಿವೇಶನದ ಎರಡನೇ ದಿನವಾದ ಗುರುವಾರವು ಸರ್ವೋಚ್ಚ ನ್ಯಾಯಾಲಯವು ಸೂಚಿಸಿರುವ ಕಾನೂನಿನ ಭವಿಷ್ಯದ ಕುರಿತು ಸುಳಿವುಗಳನ್ನು ನೀಡಿದೆ.

ಗುಂಪುಗಳಿಂದ ಹತ್ಯೆ ಪ್ರಕರಣಗಳನ್ನು ಗುರುವಾರ ಸದನದಲ್ಲಿ ಖಂಡಿಸಿದ ಗೃಹಸಚಿವ ರಾಜನಾಥ ಸಿಂಗ್ ಅವರು, ಹಿಂದೆ ಇಂತಹ ಘಟನೆಗಳು ನಡೆದಿರಲಿಲ್ಲವೆಂದಲ್ಲ. ಆದರೆ,ಯಾರೇ ಹತ್ಯೆಯಾಗಿರಲಿ,ಅದು ಎಲ್ಲ ಸರಕಾರಗಳಿಗೂ ಕಳವಳದ ವಿಷಯವಾಗಿದೆ ಎಂದು ಹೇಳಿದರು.

 ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ರಾಜ್ಯ ಸರಕಾರಗಳ ಜವಾಬ್ದಾರಿಯಾಗಿದೆ ಎಂದು ಪುನರುಚ್ಚರಿಸಿದ ಅವರು,ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ವಿಷಯವಾಗಿದ್ದರೂ ಕೇಂದ್ರವು ಸುಮ್ಮನಿರುವಂತಿಲ್ಲ. ಅದು ಈಗಾಗಲೇ ಸೂಕ್ತ ನಿರ್ದೇಶಗಳನ್ನು ಹೊರಡಿಸಿದೆ ಎಂದರು.

ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ಹೊಣೆಗಾರಿಕೆಯಾಗಿದೆ ಎಂದು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವ ಸಿಂಗ್,ಅವು ನೆರವನ್ನು ಕೋರಿದರೆ ನಾವು ನೆರವು ನೀಡುತ್ತೇವೆ. ಆದರೆ ನೇರವಾಗಿ ಹಸ್ತಕ್ಷೇಪ ಮಾಡಲು ಸಂವಿಧಾನವು ನಮಗೆ ಅನುಮತಿ ನೀಡುವುದಿಲ್ಲ. ಥಳಿಸಿ ಹತ್ಯೆಗಳು ನಡೆದಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಾನು ಮಾತನಾಡಿದ್ದೇನೆ ಎಂದರು.

 ಈ ಪಿಡುಗಿಗೆ ಸುಳ್ಳು ಸುದ್ದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳ ಹರಡುವಿಕೆ ಕಾರಣವಾಗಿದೆ ಎಂದು ಆರೋಪಿಸಿದ ಅವರು,ಇದಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News