ಸಂಸತ್ತಿನಲ್ಲಿ ಸಚಿವರ ಕಿವಿ ಹಿಂಡಿದ ನಾಯ್ಡು

Update: 2018-07-19 16:24 GMT

ಹೊಸದಿಲ್ಲಿ, ಜು.19: ಗುರುವಾರ ಸದನದಲ್ಲಿ ಕಾಗದಪತ್ರಗಳನ್ನು ಮಂಡಿಸುವ ಸಂದರ್ಭದಲ್ಲಿ ‘ಐ ಬೆಗ್ ಟು...’ ಎಂಬ ವಸಾಹತುಶಾಹಿ ವಿಶೇಷಣದೊಂದಿಗೆ ಮಾತು ಆರಂಭಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ತರಾಟೆಗೆತ್ತಿಕೊಂಡರು.

ಬೆಳಿಗ್ಗೆ ಸದನವು ಸೇರುತ್ತಿದ್ದಂತೆ ಬಾಹ್ಯಾಕಾಶ ಇಲಾಖೆಗೆ ಸಂಬಂಧಿಸಿದ ಕಾಗದಪತ್ರಗಳನ್ನು ಮಂಡಿಸಿದ ಸಿಂಗ್ ‘ನನ್ನ ಹೆಸರಿನಲ್ಲಿರುವ ಕಾಗದಪತ್ರಗಳನ್ನು ಮಂಡಿಸಲು ಅನುಮತಿ ಬೇಡುತ್ತೇನೆ ’ಎಂದು ಹೇಳಿದಾಗ,ನಾಯ್ಡು ಅವರು,‘ಒಂದು ವರ್ಷದ ಹಿಂದೆಯೇ ನಾವು ಬೇಡುವುದನ್ನು ನಿಲ್ಲಿಸಿದ್ದೇವೆ. ನೀವು ಹಿಂದುಳಿದಿದ್ದೀರಿ’ ಎಂದು ಕುಟುಕಿದರು.

ಸದಸ್ಯರು ಬೇಡಬೇಕಿಲ್ಲ, ವರದಿ ಇತ್ಯಾದಿಗಳನ್ನು ಮಂಡಿಸುತ್ತಿದ್ದೇನೆ ಎಂದಷ್ಟೇ ಹೇಳಿದರೆ ಸಾಕು ಎಂದ ನಾಯ್ಡು,‘ಈ ಬೆಗ್ ಟು..’ಎನ್ನುವುದು ಅಸಂಸದೀಯವಲ್ಲದಿದ್ದರೂ ಅದನ್ನು ಭಾರತೀಯಗೊಳಿಸುವುದು ಸೂಕ್ತವಾಗುತ್ತದೆ ಎಂದರು.

 ಕಳೆದ ವರ್ಷ ರಾಜ್ಯಸಭೆಯ ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಾಯ್ಡು ಅವರು,ಸದನದಲ್ಲಿ ಅಧಿಕೃತ ಕಾಗದಪತ್ರಗಳನ್ನ್ನು ಮಂಡಿಸುವಾಗ ‘ಬೇಡುತ್ತೇನೆ’ಎಂಬ ಶಬ್ದವನ್ನು ಬಳಸದಂತೆ ಸಚಿವರು ಮತ್ತು ಸದಸ್ಯರಿಗೆ ಸಲಹೆ ನೀಡಿದ್ದರು.

ಆಗಿನಿಂದಲೂ ನಾಯ್ಡು ಅವರ ಸೂಚನೆಯನ್ನು ಹೆಚ್ಚುಕಡಿಮೆ ಎಲ್ಲರೂ ಪಾಲಿಸುತ್ತಿರುವರಾದರೂ ಆಗಾಗ್ಗೆ ‘ ಐ ಬೆಗ್‌ಟು..’ಎನ್ನುವುದು ಕೇಳಿಬರುತ್ತಲೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News