ಶಿರೂರು ಶ್ರೀ ಸಂಶಯಾಸ್ಪದ ಸಾವು ಪ್ರಕರಣ : ಶಿರೂರು ಮೂಲ ಮಠದ ಕೋಣೆಗಳು ಪೊಲೀಸ್ ಸುಪರ್ದಿಗೆ

Update: 2018-07-19 17:02 GMT

ಹಿರಿಯಡ್ಕ, ಜು.19: ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಸಂಶಯಾಸ್ಪದ ಸಾವಿನ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಸಾಕ್ಷ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಹಿರಿಯಡ್ಕ ಸಮೀಪ ಇರುವ ಶಿರೂರು ಮೂಲ ಮಠದ ಎರಡು ಕೋಣೆಗಳನ್ನು ಸುಪರ್ದಿಗೆ ಪಡೆದುಕೊಂಡಿದ್ದಾರೆ.

ಜು.16ರಂದು ಮಧ್ಯಾಹ್ನ 1:30ರ ಸುಮಾರಿಗೆ ಶಿರೂರು ಮೂಲ ಮಠದಲ್ಲಿ ಮಧ್ಯಾಹ್ನದ ಆಹಾರ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದ ಶಿರೂರು ಸ್ವಾಮೀಜಿ, ಜು.19ರಂದು ಬೆಳಗ್ಗೆ 8:30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತರ ಮರಣದಲ್ಲಿ ಸಂಶಯವಿರುವುದಾಗಿ ಶಿರೂರು ಸ್ವಾಮೀಜಿಯ ಪೂರ್ವಾಶ್ರಮದ ಸಹೋದರ ಒಳಕಾಡು ನಿವಾಸಿ ಲಾತವ್ಯ ಆಚಾರ್ಯ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ನಿರ್ದೇಶನದಂತೆ ತನಿಖೆ ಆರಂಭಿಸಿರುವ ಪೊಲೀಸರು, ಸಾಕ್ಷ್ಯ ನಾಶವಾಗದಂತೆ ಶಿರೂರು ಮೂಲ ಮಠದ ಅಡುಗೆ ಕೋಣೆ ಹಾಗೂ ಸ್ವಾಮೀಜಿ ತಂಗುವ ಕೋಣೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಹಾರದಲ್ಲಿ ವಿಷಪ್ರಾಶನ ಆಗಿ ಸಾವನ್ನಾಪ್ಪಿರುವ ದೂರಿನ ಹಿನ್ನೆಲೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಈ ಕೋಣೆಗಳಲ್ಲಿ ಅಗತ್ಯ ಸಾಕ್ಷ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ.

ಮೂಲ ಮಠದ ಈ ಎರಡು ಕೋಣೆಗಳ ಸುತ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಮೂಲ ಮಠಕ್ಕೆ ತೆರಳಿ ಪರಿ ಶೀಲನೆ ನಡೆಸಿದ್ದಾರೆ.

ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ವಿವಿಧ ಆಯಾಗಳಲ್ಲಿ ತನಿಖೆ ನಡೆಸುತ್ತಿದೆ. ಉಡುಪಿಯಲ್ಲಿರುವ ಶಿರೂರು ಮಠದಲ್ಲಿಯೂ ಪೊಲೀಸರು ತನಿಖೆ ನಡೆಸ ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News