ಶೀರೂರು ಮೂಲ ಮಠದಲ್ಲಿ ಶಿರೂರು ಸ್ವಾಮೀಜಿ ಅಂತ್ಯಕ್ರಿಯೆ

Update: 2018-07-19 17:08 GMT

ಶಿರೂರು (ಹಿರಿಯಡ್ಕ), ಜು.19: ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ವೃಂದಾವನ ಪ್ರವೇಶ ಗುರುವಾರ ಸಂಜೆ ಹಿರಿಯಡಕ ಸಮೀಪದ ಶೀರೂರು ಮೂಲ ಮಠದಲ್ಲಿ ನೆರವೇರಿತು.

ಉಡುಪಿ ಶ್ರೀಕೃಷ್ಣ ಮಠದಿಂದ ಸಂಜೆ 6ಗಂಟೆಗೆ ತೆರೆದ ಜೀಪಿನಲ್ಲಿ ಹೊರಟ ಸ್ವಾಮೀಜಿಯ ಪಾರ್ಥೀವ ಶರೀರ ಸಂಜೆ 7ಗಂಟೆಗೆ ಮೂಲ ಮಠ ತಲುಪಿತು. ದಾರಿಯುದ್ದಕ್ಕೂ ಜನರು ಕಾದು ನಿಂತು ಗೌರವ ಪಾರ್ಥಿವ ಶರೀರದ ದರ್ಶನ ಮಾಡಿದರು. ಮಠದ ಹಿಂಬದಿಯಲ್ಲಿ ಹರಿಯುವ ಸ್ವರ್ಣಾ ನದಿಯಲ್ಲಿ ಪಾರ್ಥಿವ ಶರೀರದ ಸ್ನಾನ ಮಾಡಿಸಲಾಯಿತು.

ಬಳಿಕ ಪಾರ್ಥಿವ ಶರೀರವನ್ನು ಮಠದೊಳಗೆ ತಂದು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಮಠದ ಮುಖ್ಯಪ್ರಾಣ ದೇವರ ಗುಡಿ ಹೊರಗೆ ಇರುವ ಜಾಗದಲ್ಲಿ ವೃಂದಾವನ ನಿರ್ಮಿಸಿ, ತಲೆಯ ಮೇಲಿಂದ ಸಾಂಕೇತಿಕವಾಗಿ ತೆಂಗಿನ ಕಾಯಿಯನ್ನು ಒಡೆಯಲಾಯಿತು. ಪಾರ್ಥೀವ ಶರೀರದ ಸುತ್ತ ಹತ್ತಿಯನ್ನು ಹಾಕಿ ಉಪ್ಪು, ಸಾಸಿವೆ, ಪಚ್ಚಕರ್ಪೂರ, ಕಾಳು ಮೆಣಸನ್ನು ಸುರಿಯಲಾಯಿತು. ಮೇಲ್ಭಾಗ ಕಲ್ಲು ಚಪ್ಪಡಿಯನ್ನು ಹಾಕಿ ಅದರ ಮೇಲೆ ತುಳಸಿ ಗಿಡವನ್ನು ನೆಡಲಾಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ, ಅದಮಾರು ಮಠದ ಕಿರಿಯ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾ ವಲ್ಲಭತೀರ್ಥ ಸ್ವಾಮೀಜಿ ಪಾಲ್ಗೊಂಡರು. ಕೇಮಾರು ಶ್ರೀಈಶವಿಠಲದಾಸ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಮಠದ ಸುತ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು, ಎಸ್ಪಿ ಲಕ್ಷ್ಮಣ್ ನಿಂಬರಗಿ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದರು. ಸಾರ್ವಜನಿಕರು ಮಠದೊಳಗೆ ಪ್ರವೇಶಿದಂತೆ ಬಾಗಿಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News