ತಿರುಪತಿಯಲ್ಲಿ ನಾಪತ್ತೆಯಾಗಿದ್ದ ತೆಂಕ ಎಡಪದವು ನಿವಾಸಿ ಚೆನ್ನೈಯಲ್ಲಿ ಪತ್ತೆ

Update: 2018-07-19 20:01 GMT

ಮಂಗಳೂರು, ಜು.19: ಐದು ದಿನಗಳ ಹಿಂದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಿರುಪತಿಯಲ್ಲಿ ನಾಪತ್ತೆಯಾಗಿದ್ದ ತೆಂಕ ಎಡಪದವು ನಿವಾಸಿಯೊಬ್ಬರು ಇಂದು ಚೆನ್ನೈಯಲ್ಲಿ ಪತ್ತೆಯಾಗಿದ್ದಾರೆ. ಎಡಪದವು ಶಿಬ್ರಿಕೆರೆ ನಿವಾಸಿ ಸುಬ್ರಾಯ ಕಾರಂತ್(78) ಚೆನ್ನೈಯಲ್ಲಿ ಪತ್ತೆಯಾದವರಾಗಿದ್ದಾರೆ.

ಇವರು ಜುಲೈ 14ರಂದು ರಾತ್ರಿ ಪತ್ನಿಯೊಂದಿಗೆ ಮಂಗಳೂರು ರೈಲು ನಿಲ್ದಾಣದಿಂದ ವಿವೇಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶ್ರೀಕಾಕುಲಂಗೆ ಹೊರಟಿದ್ದರು. ಆದರೆ ಜು.15ರಂದು ಮಧ್ಯಾಹ್ನ ಸುಬ್ರಾಯ ಕಾರಂತ್ ರೈಲಿನಿಂದ ನಾಪತ್ತೆಯಾಗಿದ್ದರು. ಪ್ರಯಾಣದ ಮಧ್ಯೆ ತಿರುಪತಿ ನಿಲ್ದಾಣದಲ್ಲಿ ರೈಲು ಅವರು ಇಳಿದಿರುವುದಾಗಿ ಬಳಿಕ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮನೆಮಂದಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಲ್ಲದೆ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಇಂದು ಬೆಳಗ್ಗೆ www.varthabharati.in ವೆಬ್‌ಸೈಟ್‌ನಲ್ಲಿ ಅವರು ನಾಪತ್ತೆಯಾಗಿರುವ ಬಗ್ಗೆ ಸುದ್ದಿಯೂ ಪ್ರಕಟವಾಗಿತ್ತು.

ಈ ನಡುವೆ ಇಂದು ಅಪರಾಹ್ನದ ಬಳಿಕ ಮೂಡುಬಿದಿರೆಯ ಸಿ.ಎಚ್.ಮೆಡಿಕಲ್‌ನ ಮಾಲಕ ಸಿ.ಎಚ್.ಅಬ್ದುಲ್ ಗಫೂರ್‌ರಿಗೆ ಚೆನ್ನೈಯಿಂದ ಸಮಾಜ ಸೇವಕ ವೆಂಕಟೇಶ್ ಎಂಬವರು ದೂರವಾಣಿ ಕರೆ ಮಾಡಿ, ನಿಮ್ಮೂರಿನ ವ್ಯಕ್ತಿಯೊಬ್ಬರು ಅಸ್ವಸ್ಥ ಸ್ಥಿತಿಯಲ್ಲಿ ಇಲ್ಲಿ ಪತ್ತೆಯಾಗಿದ್ದಾರೆ. ಅವರಲ್ಲಿ ನಿಮ್ಮ ಮೆಡಿಕಲ್‌ನ ಚೀಟಿ ದೊರೆತಿದ್ದು, ಅದರಲ್ಲಿದ್ದ ದೂರವಾಣಿ ಸಂಖ್ಯೆಯನ್ನು ಗಮನಿಸಿ ಕರೆ ಮಾಡಿದ್ದಾಗಿ ಹೇಳಿದ್ದಾರೆ.

ವೆಂಕಟೇಶ್‌ರಿಂದ ಆ ವ್ಯಕ್ತಿಯ ಫೋಟೊವನ್ನು ವ್ಯಾಟ್ಸ್‌ಆ್ಯಪ್ ಮೂಲಕ ತರಿಸಿಕೊಂಡ ಗಫೂರ್ ಅದನ್ನು ವಿವಿಧ ವ್ಯಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿ ಫೋಟೊದಲ್ಲಿದ್ದವರ ಗುರುತು ಪತ್ತೆಗೆ ಕೋರಿದ್ದರು. ವ್ಯಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ಫೋಟೊ ಹಾಗೂ ವಾರ್ತಾಭಾರತಿ ವೆಬ್‌ಸೈಟ್‌ನಲ್ಲಿ ನಾಪತ್ತೆ ಹೆಸರಿನಲ್ಲಿ ಪ್ರಕಟವಾಗಿದ್ದ ಸುದ್ದಿಯೊಂದಿಗಿದ್ದ ಸುಬ್ರಾಯ ಕಾರಂತ್‌ರ ಫೋಟೊ ಒಂದೇ ಆಗಿರುವುದನ್ನು ಗಮನಿಸಿ ಗಫೂರ್‌ರಿಗೆ ಯಾರೋ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬಳಿಕ ಗಫೂರ್ ಅವರು ‘ವಾರ್ತಾಭಾರತಿ’ ವೆಬ್‌ಸೈಟ್‌ನ ಸುದ್ದಿಯಲ್ಲಿದ್ದ ಸುಬ್ರಾಯರ ಪುತ್ರನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಸುಬ್ರಾಯ ಅವರು ಚೆನ್ನೈಯಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಆತಂಕಿತರಾಗಿದ್ದ ಸುಬ್ರಾಯ ಕಾರಂತ ಅವರು ಮನೆಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News