ಮಂಗಳೂರು ವನ್ ನೌಕರರಿಂದ ಧರಣಿ

Update: 2018-07-20 11:26 GMT

ಮಂಗಳೂರು, ಜು.20: ಕರ್ನಾಟಕ ವನ್ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆ ಪ್ರಕಾರ ಕನಿಷ್ಠ ವೇತನ, ಕೆಲಸ ಕಳೆದುಕೊಂಡ ಆರು ಮಂದಿಗೆ ಮತ್ತೆ ಉದ್ಯೋಗ ಹಾಗೂ ಇತರ ಮೂಲಭೂತ ಸೌಕರ್ಯ ಒತ್ತಾಯಿಸಿ ಇಂಟಕ್ (ಇಂಡಿಯನ್ ನೇಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್) ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಮಂಗಳೂರು ವನ್ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ಸಮಸ್ಯೆ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದ್ದು, ಮುಂದಿನ 15 ದಿನದೊಳಗೆ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ರಾಜ್ಯದಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟದ ನೇತೃತ್ವ ವಹಿಸಿದ ಇಂಟಕ್ ಕಾರ್ಮಿಕ ಸಂಘಟನೆಯ ರಾಜ್ಯ ಅಧ್ಯಕ್ಷ ರಾಕೇಶ್ ಮಲ್ಲಿ ತಿಳಿಸಿದರು.

ಕರ್ನಾಟಕ ವನ್ (ಮಂಗಳೂರಿನಲ್ಲಿ ಮಂಗಳೂರು ವನ್) ನಲ್ಲಿ ರಾಜ್ಯದಾದ್ಯಂತ ದುಡಿಯುತ್ತಿರುವ 2000 ಕ್ಕೂ ಅಧಿಕ ಕಾರ್ಮಿಕರಿಗೆ ಮಾಸಿಕ 13,365 ರೂ. ಕನಿಷ್ಠ ವೇತನ ನೀಡಬೇಕು (ಈಗ ತಲಾ ನಾಲ್ಕು ಸಾವಿರದಿಂದ ಏಳು ಸಾವಿರ ರೂ. ತನಕ ಇದೆ), ಇಎಸ್‌ಐ, ಪಿಎಫ್ ಮತ್ತಿತರ ನ್ಯಾಯಬದ್ದ ಸೌಲಭ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಚಿವ ಯು.ಟಿ.ಖಾದರ್, ಕಾರ್ಮಿಕ ಮುಖಂಡರು ಹಾಗೂ ಮಂಗಳೂರು ವನ್ ಗುತ್ತಿಗೆ ಸಂಸ್ಥೆಯ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಸಚಿವರು, ಪ್ರಕರಣದ ಬಗ್ಗೆ ಎರಡು ದಿನಗಳೊಳಗೆ ಜಿಲ್ಲಾಧಿಕಾರಿಯವರಿಂದ ವರದಿ ಪಡೆದು ಕಾರ್ಮಿಕ ಸಚಿವರು ಹಾಗೂ ಆಯುಕ್ತರ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಆರು ಮಂದಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವ ಬಗ್ಗೆ ಕೂಡ ಪರಿಶೀಲಿಸಲಾಗುವುದು. ತಪ್ಪೆಸಗಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಕೂಡ ಸರ್ಕಾರ ಬದ್ದವಾಗಿದೆ ಎಂದು ಭರವಸೆ ನೀಡಿದ ಬಳಿಕ ಹೋರಾಟಗಾರರು ಪ್ರತಿಭಟನೆ ಹಿಂಪಡೆದರು.

ಸರಕಾರ ಮಧ್ಯ ಪ್ರವೇಶಕ್ಕೆ ಒತ್ತಾಯ:
ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಐವನ್‌ಡಿಸೋಜ, ಇದೊಂದು ಗಂಭೀರ ವಿಷಯ. ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.

ಮಹಿಳೆಯರ ಬೆಂಬಲ ಕೋರಿಕೆ
ಮಂಗಳೂರು ವನ್‌ನಲ್ಲಿ ರಾಜ್ಯದಾದ್ಯಂತ ಇರುವ ಕಾರ್ಮಿಕರಲ್ಲಿ ಶೇ.90 ಮಹಿಳೆಯರು. ಆದ್ದರಿಂದ ಮಹಿಳೆಯರ ಪರ ಇಂಟಕ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಮಹಿಳಾ ಸಂಘಟನೆಗಳು ಬೆಂಬಲ ನೀಡುವಂತೆ ಕಾರ್ಮಿಕರ ಮುಖಂಡ ದಿನಕರ ಶೆಟ್ಟಿ ಆಗ್ರಹಿಸಿದರು.

ಇಂಟಕ್‌ ಜಿಲ್ಲಾ ಅಧ್ಯಕ್ಷ ಮನೋಹರ್ ಶೆಟ್ಟಿ, ರಾಜ್ಯ ಪ್ರದಾನ ಕಾರ್ಯದರ್ಶಿ ಪಿ.ಕೆ.ಸುರೇಶ್, ಜಿಲ್ಲಾ ಉಪಾಧ್ಯಕ್ಷ ಸ್ಟೀವನ್, ಪ್ರ. ಕಾರ್ಯದರ್ಶಿ ರೇಖಾ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News