ರೈತರ ಸಮಸ್ಯೆ ಆಲಿಸಲು ತಾಲೂಕು ಮಟ್ಟದಲ್ಲಿ ಸಭೆ: ದ.ಕ. ಜಿಲ್ಲಾಧಿಕಾರಿ

Update: 2018-07-20 14:44 GMT

ಮಂಗಳೂರು, ಜು.20: ರೈತರ ಸಮಸ್ಯೆಯನ್ನು ಸಮಗ್ರವಾಗಿ ಆಲಿಸಿ, ಅದಕ್ಕೆ ತಮ್ಮ ಮಟ್ಟದಲ್ಲಿ ಆಗುವ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಮುಂದಿನ ವಾರದಿಂದಲೇ ಪ್ರತಿ ತಾಲೂಕು ಮಟ್ಟದ ಸಭೆಗಳನ್ನು ತಮ್ಮ ಅಧ್ಯಕ್ಷತೆಯಲ್ಲಿ ನಡೆಸುವುದಾಗಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರೈತರಿಗೆ ಭರವಸೆ ನೀಡಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇಂದು ರೈತರ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಕರೆಯಲಾದ ಜಿಲ್ಲಾ ಮಟ್ಟದ ಸಭೆಯಲ್ಲಿ ನೂರಾರು ರೈತರು ಭಾಗವಹಿಸಿ ಹಲವಾರು ರೀತಿಯ ಸಮಸ್ಯೆಗಳು, ಸಲಹೆಗಳು, ಬೇಡಿಕೆಗಳನ್ನು ಮುಂದಿಟ್ಟರು. ಕೆಲವೊಂದು ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ರೈತರು ಮುಂದಿಟ್ಟಾಗ ಈ ಬಗ್ಗೆ ಸಮಗ್ರವಾಗಿ ತಿಳಿದು ಅದಕ್ಕೊಂದು ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ತಾಲೂಕು ಮಟ್ಟದಲ್ಲೇ ಸಭೆಯನ್ನು ನಡೆಸುವುದಾಗಿ ಹೇಳಿದರು.

ರೈತ ಸಂಪರ್ಕ ಕೇಂದ್ರಕ್ಕಾಗಿ ಶಿಲಾನ್ಯಾಸ ನೆರವೇರಿದ ಜಾಗದಲ್ಲಿ ಕಸದ ರಾಶಿ!

ಮೂಡಬಿದ್ರೆಯಲ್ಲಿ ರೈತ ಸಂಪರ್ಕ ಕೇಂದ್ರಕ್ಕಾಗಿ ಜಾಗ ಮಂಜೂರಾಗಿ ಶಿಲಾನ್ಯಾಸ ಆಗಿ ನಾಲ್ಕು ತಿಂಗಳಾದರೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಬದಲಾಗಿ ಆ ಜಾಗ ಕಸದ ರಾಶಿಯಾಗಿ ಮಾರ್ಪಡುತ್ತಿದೆ ಎಂದು ಸ್ಥಳೀಯ ರೈತ ಧನಂಜಯ ಸಭೆಯಲ್ಲಿ ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ ಕೃಷಿಕರು ಅಡಿಕೆ, ತೆಂಗು ಮೊದಲಾದ ಕೃಷಿ ಬೆಳೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದು, ಬ್ಯಾಂಕ್‌ಗಳಲ್ಲಿ ಸಮರ್ಪಕವಾಗಿ ಸಾಲ ದೊರೆಯದ ಕಾರಣ ಬಡ್ಡಿಗೆ ಹಣ ಪಡೆಯುವ ಪ್ರಮೇಯವಿದೆ. ಮೀಟರ್ ಬಡ್ಡಿಗೆ ಸ್ಪಷ್ಟವಾದ ಕಡಿವಾಣವನ್ನು ಹಾಕಬೇಕು ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಯಾದವ ಶೆಟ್ಟಿ ಒತ್ತಾಯಿಸಿದರು.

ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಫಲಿತಾಂಶ ಒದಗಿಸುವಲ್ಲಿ ಚುರುಕು ಮುಟ್ಟಿಸಬೇಕು ಹಾಗೂ ಬೆಳ್ತಂಗಡಿಯ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅಂತಾರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಬೇಕು ಎಂದು ಕೃಷ್ಣರಾಜ ಹೆಗಡೆ ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ರವಿಕಿರಣ್ ಪುಣಚ ಮಾತನಾಡಿ, ಜಿಲ್ಲೆಯಲ್ಲಿ 13 ವರ್ಷಗಳ ಬಳಿಕ ಈ ವರ್ಷ ನಿರಂತರ ಮಳೆ ಬಂದು ಅಡಿಕೆ ತೋಟಗಳಲ್ಲಿ ಈಗಾಗಲೇ ಶೇ. 30ರಷ್ಟು ಭಾಗ ಕೊಳೆರೋಗಕ್ಕೆ ತುತ್ತಾಗಿದೆ ಎಂದರು. ಅಡಿಕೆ ಖರೀದಿ ಸಂದರ್ಭದಲ್ಲಿಯೂ ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳು ಹಳೆ ಅಡಿಕೆಯನ್ನು ಹೊಸ ಅಡಿಕೆ ದರದಲ್ಲಿ ಖರೀದಿಸಿ ಹಗಲು ದರೋಡೆ ಮಾಡುತ್ತಿದ್ದಾರೆ. ಹಳದಿ ರೋಗದಿಂದಲೂ ತೋಟಗಳು ಹಾಳಾಗಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿರುವ ಸಾಲಮನ್ನಾವನ್ನು ಸಂಪೂರ್ಣ ಸಾಲಮನ್ನಾವಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.

ಗ್ರಾ.ಪಂ.ನಿಂದ ಆರ್‌ಟಿಸಿ ಒದಗಿಸಲು ಒಂದು ವಾರದೊಳಗೆ ಕ್ರಮ

ಸಭೆಯಲ್ಲಿ ಹಲವು ರೈತರಿಂದ ಆರ್‌ಟಿಸಿ ನೀಡುವಲ್ಲಿ ಗೊಂದಲವಾಗುತ್ತಿರುವ ಬಗ್ಗೆ ಸಮಸ್ಯೆ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ರೈತರ ಭೂಮಿಗೆ ಸಂಬಂಧಿಸಿದ ಆರ್‌ಟಿಸಿಯನ್ನು ಗ್ರಾಪಂ ಮಟ್ಟದಲ್ಲಿಯೇ ಒದಗಿಸಲು ಸರಕಾರದಿಂದ ನಿರ್ಣಯವಾಗಿ ತಂತ್ರಾಂಶವನ್ನೂ ಅಳವಡಿಸಲಾಗಿದೆ. ಕೆಲವು ಗ್ರಾಪಂಗಳಿಗೆ ಈ ಬಗ್ಗೆ ಮಾಹಿತಿ ಇಲ್ಲದಿರುವುದಾಗಿ ರೈತರು ಹೇಳಿಕೊಂಡಿದ್ದಾರೆ. ಒಂದು ವಾರದೊಳಗೆ ಎಲ್ಲಾ ಗ್ರಾಪಂಗಳಿಂದಲೂ ಆರ್‌ಟಿಸಿ ಒದಗಿಸುವ ನಿಟ್ಟಿನಲ್ಲಿ ಸೂಚನೆಯನ್ನು ನೀಡುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ಕಂದಾಯ ಇಲಾಖೆಯ ಪಿಂಚಣಿ, ಜನಸಂಪರ್ಕ ಸಭೆಯನ್ನು ಸೂಕ್ತ ಸಮಯದಲ್ಲಿ ನಡೆಸಲು ಹಾಗೂ ಈ ಬಗ್ಗೆ ಗ್ರಾಮಸಭೆಯಲ್ಲಿ ಮಾಹಿತಿ ಒದಗಿಸಲು ಸೂಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಸಂಪೂರ್ಣ ಸಾಲಮನ್ನಾದ ಕುರಿತಾದ ರೈತರ ಬೇಡಿಕೆಯ ಪ್ರಸ್ತಾಪವನ್ನು ಮುಖ್ಯಮಂತ್ರಿಗೆ ತಲುಪಿಸಲಾಗುವುದು. ಬೆಳೆ ವಿಮೆ ಯೋಜನೆ ಇನ್ನೂ ಕೆಲ ರೈತರನ್ನು ತಲುಪಿಲ್ಲ. ಕೆಲವರಿಗೆ ಮಾಹಿತಿಯೇ ಇಲ್ಲ. ಈ ಬಗ್ಗೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು. ಈ ಬಾರಿ ಮಳೆ ಅಧಿಕವಾಗಿರುವುದರಿಂದ ಅಡಿಕೆ ಬೆಳೆಗೆ ಕೊಳೆ ರೋಗ ತಗಲುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಗೆ 25 ಸರ್ವೇಯರ್‌ಗಳು ಹೊಸತಾಗಿ ನೇಮಕವಾಗಿದ್ದು, 20 ಗ್ರಾಮ ಕರಣಿಕರನ್ನು ಜಿಲ್ಲಾಡಳಿತದ ಮಟ್ಟದಲ್ಲಿ ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ತುಂಬೆ ಅಣೆಕಟ್ಟು 6 ಮೀ. ನೀರು ನಿಲುಗಡೆ: ಸಂತ್ರಸ್ತರಿಗೆ ಸಿಕ್ಕಿಲ್ಲ ಪರಿಹಾರ
ತುಂಬೆಯಲ್ಲಿ ನೂತನ ಅಣೆಕಟ್ಟು ನಿರ್ಮಾಣದ ವೇಳೆ 4 ಮೀಟರ್‌ವರೆಗೆ ನೀರು ನಿಲುಗಡೆ ಮಾಡುವುದಾಗಿ ಹೇಳಿ 5 ಮೀಟರ್ ವರೆಗೆ ನಿಲ್ಲಿಸಲಾಯಿತು. ಇದೀಗ ಈ ವರ್ಷ 6 ಮೀಟರ್‌ವರೆಗೆ ನಿಲ್ಲಿಸಲಾಗಿದೆ. ಆದರೆ 5 ಮೀಟರ್ ನೀರು ನಿಲುಗಡೆಗೆ ಸಂಬಂಧಿಸಿ ಇನ್ನೂ ಶೇ.30 ಮಂದಿಗೆ ಪರಿಹಾರ ದೊರಕಿಲ್ಲ. 6 ಮೀಟರ್‌ಗೆ ನೀರು ನಿಲುಗಡೆಗೆ ಸಂಬಂಧಿಸಿ ಇನ್ನೂ ಯಾರೊಬ್ಬರಿಗೂ ಪರಿಹಾರ ದೊರಕಿಲ್ಲ. ಮುಳುಗಡೆಯಾಗುವ ಸಜಿಪಮುನ್ನೂರು, ಪಾಣೆಮಂಗಳೂರು, ನರಿಕೊಬು, ಬಿ ಮೂಡ ಹಾಗೂ ಕಳ್ಳಿಗೆ ಪ್ರದೇಶದ ಸಂತ್ರಸ್ತರಿಗೆ ಪರಿಹಾರ ದೊರಕಿಲ್ಲ. ಇದಲ್ಲದೆ ಕೇಂದ್ರ ಸಲನೀತಿ ಆಯೋಗದ ಪ್ರಕಾರ ಆರು ಮೀಟರ್ ನಿಲುಗಡೆ ಮಾಡಬೇಕಾದರೆ ಏಳು ಮೀಟರ್‌ವರೆಗೆ ಸರ್ವೆ ನಡೆಸಬೇಕು. ಆದರೆ ಆ ಕಾರ್ಯವೂ ನಡೆದಿಲ್ಲ ಎಂದು ಬಂಟ್ವಾಳದ ರೈತ ಮುಖಂಡ ಸುಬ್ರಹ್ಮಣ್ಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಿ ರೈತರಿಗೆ ನೀರು ಒದಗಿಸುವುದನ್ನು ಹೆಚ್ಚಿಸಬಹುದು ಎಂದು ಸಲಹೆ ನೀಡಿದ ಅವರು, ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರ ಸಾಲ ಮರುಪಾವತಿಯಾಗದ ವೇಳೆ ಹರಾಜು ವೇಳೆ ಅವರ ಹೆಸರನ್ನು ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ನಾಯಕ ವಿಕ್ಟರ್ ಮಾರ್ಟಿಸ್ ಎಂಬವರು ಮಾತನಾಡಿ ಹೋಬಳಿಯಲ್ಲಿ ರೈತ ಭವನ ನಿರ್ಮಾಣವಾಗಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಆ್ಯಂಟನಿ ಇಮ್ಯಾನುವೆಲ್, ತೋಟಗಾರಿಕೆ ಇಲಾಖೆಯ ಯೋಗೀಶ್, ಪುತ್ತೂರು ಸಹಾಯಕ ಆಯುಕ್ತ ಕೃಷ್ಣಮೂರ್ತಿ, ಮಂಗಳೂರು ಸಹಾಯಕ ಆಯುಕ್ತ ರೇಣುಕ ಪ್ರಸಾದ್ ಉಪಸ್ಥಿತರಿದ್ದರು.


ರೈತರಿಂದ ವ್ಯಕ್ತವಾದ ಇತರ ಪ್ರಮುಖ ಸಮಸ್ಯೆ, ಸಲಹೆಗಳು

 * ಹವಾಮಾನಕ್ಕೆ ತಕ್ಕುದಾದ ಕೃಷಿ ಮಾಹಿತಿ ರೈತರಿಗೆ ಒದಗಿಸಬೇಕು.

* ತಜ್ಞ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ಮಾಹಿತಿ ನೀಡಬೇಕು.

* ಪಡಿತರ ಚೀಟಿದಾರರಿಗೆ ಕನಿಷ್ಠ ಒಂದು ಲೀಟರ್ ಸೀಮೆಎಣ್ಣೆಯಾದರೂ ನೀಡಬೇಕು.

* ಪ್ರತಿ ಹೋಬಳಿಗೆ ಪಶು ಆಹಾರ ಘಟಕ ನಿರ್ಮಾಣವಾಗಬೇಕು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News