ಉ.ಪ್ರದೇಶ: ಸುಳ್ಳು ಸುದ್ದಿ ವಿರುದ್ಧ ಕಾರ್ಯಾಚರಣೆಗೆ ‘ಡಿಜಿಟಲ್ ಸೇನೆ’

Update: 2018-07-20 13:33 GMT

ಲಕ್ನೊ, ಜು.20: ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವ ಮೂಲಕ ಕಾನೂನು ಮತ್ತು ಶಿಸ್ತು ಸಮಸ್ಯೆ ಹುಟ್ಟುಹಾಕುವ ಜೊತೆಗೆ ಕೋಮು ಸೌಹಾರ್ದವನ್ನು ಕದಡುವವರ ವಿರುದ್ಧ ಕಾರ್ಯಾಚರಣೆ ನಡೆಸಲು 3,67,000 ಸ್ವಯಂಸೇವಕರನ್ನು ಒಳಗೊಂಡಿರುವ ಡಿಜಿಟಲ್ ಸೇನೆಯನ್ನು ರಚಿಸಲು ಉತ್ತರ ಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ.

ರಾಜ್ಯದಾದ್ಯಂತದ 1,469 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ 250 ಸ್ವಯಂಸೇವಕರನ್ನು ಡಿಜಿಟಲ್ ಸೇನೆ ಹೊಂದಿರುತ್ತದೆ . ವಾಟ್ಸಾಪ್ ಮತ್ತಿತರ ಸಾಮಾಜಿಕ ಮಾಧ್ಯಮದಲ್ಲಿ ಹರಡಲಾಗುತ್ತಿರುವ ಗಾಳಿ ಸುದ್ದಿಗಳಿಂದ ದೇಶದಾದ್ಯಂತದ ಅಮಾಯಕ ಜನತೆ ಬಲಿಯಾಗುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಸುಳ್ಳು ಸುದ್ದಿಗಳನ್ನು ನಿರ್ಬಂಧಿಸುವಂತೆ ವಾಟ್ಸಾಪ್‌ಗೆ ಸೂಚಿಸಿದ ಬೆನ್ನಲ್ಲೇ ಯುಪಿ ಸರಕಾರ ಡಿಜಿಟಲ್ ಸೇನೆ ರಚಿಸುವ ನಿರ್ಧಾರಕ್ಕೆ ಬಂದಿದೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್ ತಿಳಿಸಿದ್ದಾರೆ.

ಈ ವರ್ಷ ಮಕ್ಕಳ ಕಳ್ಳರೆಂಬ ಗಾಳಿಸುದ್ದಿ ಹಾಗೂ ಈ ಬಗ್ಗೆ ನಕಲಿ ವೀಡಿಯೊ ವಾಟ್ಸಾಪ್ ಮೂಲಕ ಪ್ರಸಾರವಾದ ಬಳಿಕ ಕನಿಷ್ಟ ಎಂಟು ರಾಜ್ಯಗಳಲ್ಲಿ ಗುಂಪು ಹಲ್ಲೆ ಪ್ರಕರಣ ವರದಿಯಾಗಿದೆ. ಗುರುವಾರ ಉ.ಪ್ರದೇಶ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ‘ಡಿಜಿಟಲ್ ಸ್ವಯಂಸೇವಕರ ವೇದಿಕೆ’ಯನ್ನು ಅಪ್‌ಲೋಡ್ ಮಾಡಲಾಗಿದ್ದು ಇದರಲ್ಲಿ ಆಸಕ್ತ ಸ್ವಯಂಸೇವಕರು ತಮ್ಮ ಹೆಸರನ್ನು ನೋಂದಾಯಿಸಲು ಆಹ್ವಾನ ನೀಡಲಾಗಿದೆ. ಅಲ್ಲದೆ ರಾಜ್ಯದ 75 ಜಿಲ್ಲಾ ಪೊಲೀಸ್ ಮುಖ್ಯಸ್ಥರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಎಸ್ಪಿ, ವೃತ್ತ ಅಧಿಕಾರಿಗಳು, ಠಾಣಾಧಿಕಾರಿಗಳೂ ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಪ್ರತೀ ಗ್ರಾಮ, ವಾರ್ಡ್, ಪ್ರದೇಶಗಳ ಕನಿಷ್ಟ ಎರಡು ಮಂದಿಯನ್ನು ಸ್ವಯಂ ಸೇವಕರಾಗಿ ಆಯ್ಕೆ ಮಾಡಿಕೊಳ್ಳಲಾಗುವುದು. ಇವರು ಪ್ರಭಾವೀ, ಗೌರವಾನ್ವಿತ ವ್ಯಕ್ತಿಗಳಾಗಿದ್ದು ಉತ್ತಮ ನಡತೆಯನ್ನು ಹೊಂದಿದವರಾಗಿರಬೇಕು ಎಂದು ಸಿಂಗ್ ತಿಳಿಸಿದ್ದಾರೆ. ಪೊಲೀಸ್ ಠಾಣೆಗಳು ತಮ್ಮದೇ ವಾಟ್ಸಾಪ್ ತಂಡವನ್ನು ರೂಪಿಸುತ್ತವೆ. ಈ ವಾಟ್ಸಾಪ್ ತಂಡದ ಮೂಲಕ ಜಿಲ್ಲಾ ಅಧಿಕಾರಿಗಳ ಜೊತೆ ಹಾಗೂ ತಂಡದ ಇತರರ ಜೊತೆ ಸಂಪರ್ಕ ಸಾಧಿಸಬಹುದಾಗಿದೆ. ಇದರ ಮೇಲುಸ್ತುವಾರಿಯನ್ನು ಡಿಜಿಪಿ ಕೇಂದ್ರ ಕಚೇರಿಯಲ್ಲಿ ನಿರ್ವಹಿಸಲಾಗುತ್ತದೆ. ಡಿಜಿಟಲ್ ಸೇನೆಯ ಕಾರ್ಯಕರ್ತರಿಗೆ ಸಂಭಾವನೆ ನೀಡಲಾಗುವುದಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ. ಸರಕಾರದ ಯೋಜನೆಗೆ ಸಮಾಜವಾದಿ ಪಕ್ಷದ ವಕ್ತಾರ ಅಬ್ದುಲ್ ಹಫೀಝ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬುವವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಮುಂದಾದರೆ ನಮ್ಮದೇನೂ ಅಭ್ಯಂತರವಿಲ್ಲ. ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಜನರನ್ನು ಈ ಕಾರ್ಯದಲ್ಲಿ ಬಳಸಿಕೊಳ್ಳಬೇಕು. ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News