ಮಹಾರಾಷ್ಟ್ರ : ಬೈಕುಲಾ ಜೈಲಿನ 81 ಮಹಿಳಾ ಖೈದಿಗಳು ಅಸ್ವಸ್ಥ
Update: 2018-07-20 19:06 IST
ಮುಂಬೈ, ಜು.20: ಮಹಾರಾಷ್ಟ್ರದ ಬೈಕುಲಾ ಜೈಲಿನಲ್ಲಿ ನಾಲ್ಕು ತಿಂಗಳ ಮಗು, ಗರ್ಭಿಣಿಯೂ ಸೇರಿದಂತೆ 81 ಮಹಿಳಾ ಖೈದಿಗಳು ವಾಕರಿಕೆ, ವಾಂತಿ-ಭೇದಿಯ ಸಮಸ್ಯೆಗೆ ಒಳಗಾಗಿದ್ದು ಅವರನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಾಹಾರ ಸೇವನೆ ಸಮಸ್ಯೆಗೆ ಕಾರಣ ಎಂಬ ಶಂಕೆಯಿದೆ ಎಂದು ಮೂಲಗಳು ತಿಳಿಸಿವೆ.
ಶೀನಾ ಬೋರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಯನ್ನೂ ಇದೇ ಜೈಲಿನಲ್ಲಿ ಬಂಧಿಸಿಡಲಾಗಿದೆ. ಆದರೆ ಅಸ್ವಸ್ಥಗೊಂಡವರಲ್ಲಿ ಇಂದ್ರಾಣಿ ಸೇರಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 10: 00 ಗಂಟೆಯ ಸುಮಾರಿಗೆ ಮಹಿಳೆಯರು ವಾಕರಿಕೆ, ವಾಂತಿಭೇದಿಯ ಸಮಸ್ಯೆಯ ಬಗ್ಗೆ ದೂರು ನೀಡಿದ್ದು ತಕ್ಷಣ 81 ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ 24 ವಾರಗಳ ಗರ್ಭಿಣಿ ಮಹಿಳೆ ಹಾಗು 4 ತಿಂಗಳ ಮಗುವೂ ಸೇರಿದೆ. ಇವರೆಲ್ಲಾ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ಡೀನ್ ಮುಕುಂದ್ ತಾಯಡೆ ತಿಳಿಸಿದ್ದಾರೆ.