ನ್ಯಾ.ಕೆ.ಎಂ.ಜೋಸೆಫ್ ಪದೋನ್ನತಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಪಟ್ಟು
ಹೊಸದಿಲ್ಲಿ,ಜು.20: ಉತ್ತರಾಖಂಡ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಕೆ.ಎಂ.ಜೋಸೆಫ್ ಪದೋನ್ನತಿ ಕುರಿತು ತನ್ನ ನಿಲುವಿಗೆ ಅಂಟಿಕೊಂಡಿರುವ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಅವರಿಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಭಡ್ತಿ ನೀಡಲು ಕೇಂದ್ರಕ್ಕೆ ಮರುಶಿಫಾರಸು ಮಾಡಿದೆ. ಕೊಲಿಜಿಯಂ ಈ ಮೊದಲು ಮಾಡಿದ್ದ ಶಿಫಾರಸನ್ನು ಕೇಂದ್ರವು ಕಳೆದ ಎಪ್ರಿಲ್‌ನಲ್ಲಿ ತಿರಸ್ಕರಿಸಿತ್ತು.
ಐವರು ಅತ್ಯಂತ ಹಿರಿಯ ನ್ಯಾಯಾಧೀಶರನ್ನೊಳಗೊಂಡಿರುವ ಕೊಲಿಜಿಯಂ ನ್ಯಾ.ಜೋಸೆಫ್ ಅವರ ಹೆಸರನ್ನು ಕೇಂದ್ರಕ್ಕೆ ಮರುಶಿಫಾರಸು ಮಾಡಲು ಮೇ 1ರಂದು ತಾತ್ವಿಕವಾಗಿ ಒಪ್ಪಿಕೊಂಡಿತ್ತು. ಆದರೆ ಮೇ 11ರಂದು ನಡೆದಿದ್ದ ತನ್ನ ಮುಂದಿನ ಸಭೆಯಲ್ಲಿ ಈ ನಿರ್ಧಾರವನ್ನು ಮುಂದೂಡಿದ್ದ ಕೊಲಿಜಿಯಂ, ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಲಿ ಪ್ರತಿನಿಧಿತ್ವವನ್ನು ಹೊಂದಿರದ ಉಚ್ಚನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರು ಮತ್ತು ಇತರ ನ್ಯಾಯಾಧೀಶರ ಹೆಸರುಗಳ ಕುರಿತು ಇನ್ನಷ್ಟು ಚರ್ಚೆ ಮತ್ತು ವಿವರವಾದ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿತ್ತು.
ಪ್ರಸ್ತಾವವು ಸರ್ವೋಚ್ಚ ನ್ಯಾಯಾಲಯದ ಮಾನದಂಡಗಳಿಗೆ ಅನುಗುಣವಾಗಿಲ್ಲ ಮತ್ತು ಜೋಸೆಫ್‌ರ ತವರುರಾಜ್ಯ ಕೇರಳವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾಕಷ್ಟು ನ್ಯಾಯಾಧೀಶರನ್ನು ಹೊಂದಿದೆ ಎಂಬಿತ್ಯಾದಿ ಕಾರಣಗಳನ್ನೊಡ್ಡಿದ್ದ ಕೇಂದ್ರವು ನ್ಯಾ.ಜೋಸೆಫ್ ಅವರ ಕಡತವನ್ನು ಕೊಲಿಜಿಯಮ್‌ನ ಮರು ಪರಿಶೀಲನೆಗಾಗಿ ವಾಪಸ್ ಕಳುಹಿಸಿತ್ತು. ಅದು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಪೈಕಿ ನ್ಯಾ.ಜೋಸೆಫ್ ಅವರ ಜ್ಯೇಷ್ಠತೆಯನ್ನೂ ಪ್ರಶ್ನಿಸಿತ್ತು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಗಳಿಗಾಗಿ ಕೊಲಿಜಿಯಂ ಶಿಫಾರಸನ್ನು ಕೇಂದ್ರವು ವಾಪಸ್ ಕಳುಹಿಸುವುದು ಅಪರೂಪವೇನಲ್ಲ. 2016ರಲ್ಲಿ ಕೇಂದ್ರವು ಉಚ್ಚ ನ್ಯಾಯಾಲಯಗಳಿಗೆ ನೇಮಕಕ್ಕಾಗಿ ಶಿಫಾರಸು ಮಾಡಿರುವ 43 ಹೆಸರುಗಳನ್ನು ಪುನರ್‌ಪರಿಶೀಲಿಸುವಂತೆ ತಾನು ಕೊಲಿಜಿಯಮ್‌ಗೆ ಸೂಚಿಸಿದ್ದಾಗಿ ಸಂಸತ್‌ನಲ್ಲಿ ತಿಳಿಸಿತ್ತು.
ಆದರೆ ಸರ್ವೋಚ್ಚ ನ್ಯಾಯಾಲಯಕ್ಕೆ ಭಡ್ತಿಯ ಶಿಫಾರಸನ್ನು ಸರಕಾರವು ಮರಳಿಸುವುದು ಅಪರೂಪವಾಗಿದೆ. 2014ರಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಮಣಿಯಂ ಅವರ ನೇಮಕಕ್ಕೆೆ ಆಗಿನ ಎನ್‌ಡಿಎ ಸರಕಾರವು ತಡೆಯೊಡ್ಡಿದ್ದು ಇತ್ತೀಚಿನ ವರ್ಷಗಳಲ್ಲಿ ಇಂತಹ ಏಕೈಕ ಸಂದರ್ಭವಾಗಿದೆ. ಆದರೆ ನ್ಯಾಯಾಧೀಶ ಹುದ್ದೆಗೆ ತನ್ನ ಒಪ್ಪಿಗೆಯನ್ನು ಗೋಪಾಲ ಸುಬ್ರಮಣಿಯಂ ಅವರು ಹಿಂದೆಗೆದುಕೊಂಡಿದ್ದರಿಂದ ಆಗಿನ ಮು.ನ್ಯಾ.ಆರ್.ಎಂ.ಲೋಧಾ ಅವರು ಪ್ರಕರಣವನ್ನು ಮುಂದುವರಿಸಿರಲಿಲ್ಲ.
ಕೊಲಿಜಿಯಂ ತನ್ನ ಆಯ್ಕೆಯ ಹೆಸರನ್ನು ಮರುಶಿಫಾರಸು ಮಾಡಿದರೆ ಅದನ್ನು ಒಪ್ಪ್ಪಿಕೊಳ್ಳದ ಹೊರತು ಕೇಂದ್ರಕ್ಕೆ ಬೇರೆ ಆಯ್ಕೆಗಳಿಲ್ಲ. ಸರ್ವೋಚ್ಚ ನ್ಯಾಯಾಲಯದಲ್ಲಿ ಒಟ್ಟು 31 ಹುದ್ದೆಗಳಿವೆಯಾದರೂ ಕರ್ತವ್ಯನಿರತ ನ್ಯಾಯಾಧೀಶರ ಸಂಖ್ಯೆ ಈಗಾಗಲೇ 24ಕ್ಕೆ ತಗ್ಗಿದೆ. ಈ ವರ್ಷ ಇನ್ನೂ ನಾಲ್ವರು ನ್ಯಾಯಾಧೀಶರು ನಿವೃತ್ತರಾಗಲಿದ್ದಾರೆ.